ಇಡೀ ರಾಜ್ಯದ ಜನತೆ ಕಾಂಗ್ರೆಸ್‌ಗೆ ಮತಹಾಕಲು ಸಿದ್ಧರಾಗಿದ್ದಾರೆ -ಕೆ.ಸಿ.ವೇಣುಗೋಪಾಲ್

ಉಡುಪಿ, ನ.6: ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಿದೆ. ಇಡೀ ರಾಜ್ಯದ ಜನರು ತುಂಬಾ ಸಂತೋಷಗೊಂಡಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮತ ನೀಡಲು ಅವರೆಲ್ಲ ಸಿದ್ಧರಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಪಕ್ಷದ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ಪ್ರಗತಿ ಪರಿಶೀಲನೆಗೆ ಸೋಮವಾರ ಸಂಜೆ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಅವರು ಜಿಲ್ಲಾ ಕಾಂಗ್ರೆಸ್‌ನ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು.
ರಾಜ್ಯದಲ್ಲಿ ಚುನಾವಣೆಗೆ ಇನ್ನು ನಾಲ್ಕು ತಿಂಗಳು ಮಾತ್ರ ಉಳಿದಿದೆ. ಕಾಂಗ್ರೆಸ್ ಸರಕಾರದ ಕುರಿತ ಜನರ ಒಳ್ಳೆಯ ಅಭಿಪ್ರಾಯಗಳನ್ನು ಬಳಸಿ ನೀವು ಜಿಲ್ಲೆಯ ಎಲ್ಲಾ ಐದು ಸ್ಥಾನಗಳು ಈ ಬಾರಿ ಕಾಂಗ್ರೆಸ್‌ಗೆ ತೆಕ್ಕೆಗೆ ಬರುವಂತೆ ಶ್ರಮವಹಿಸಬೇಕು ಎಂದವರು ಪಕ್ಷದ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ‘ಯುದ್ಧ’ವೇ ನಡೆಯಲಿದೆ. ನಮ್ಮ ಜನಪರ ಆಡಳಿತದೊಂದಿಗೆ ಅವರ ‘ಆಚ್ಚೆ ದಿನ್’ ಘೋಷಣೆಯನ್ನು ಜನರಿಗೆ ತುಲನೆ ಮಾಡಿ ಹೇಳಿ. ಕಳೆದ ನಾಲ್ಕು ದಿನಗಳಲ್ಲಿ ಎಲ್‌ಪಿಜಿ ಬೆಲೆ 94ರೂ.ಹೆಚ್ಚಳವಾಗಿದೆ. ಇದನ್ನೇ ಕಾಂಗ್ರೆಸ್ ಸರಕಾರ ಮಾಡಿದ್ದರೆ, ಬಿಜೆಪಿಗರು ನಮಗೆ ಬದುಕಲು ಬಿಡುತ್ತಿರಲಿಲ್ಲ ಎಂದು ವೇಣುಗೋಪಾಲ್ ನುಡಿದರು.
ಕಳೆದ ನ.8ರಂದು ನಡೆದ ನೋಟುಗಳ ರದ್ದತಿಯಿಂದ ದೇಶವೇ ಹಾನಿಗೊಳ ಗಾಗಿದೆ. ತಮ್ಮ ಹಣಕ್ಕಾಗಿ ಕ್ಯೂನಿಂತ 150 ಮಂದಿ ಪ್ರಾಣವನ್ನೇ ತೆತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಒಬ್ಬನೇ ಒಬ್ಬ ಕಪ್ಪು ಹಣದನನ್ನು ಹಿಡಿಯಲು ಇವರಿಗೆ ಸಾಧ್ಯವಾಗಲಿಲ್ಲ. ಎಲ್ಲಾ ಕಡೆಯಲ್ಲೂ ಕಪ್ಪು ಹಣ ಹೊಂದಿದವರು ಸುರಕ್ಷಿತರಾಗಿ ಬಡವರು ಸಂಕಷ್ಟಕ್ಕೊಳಗಾದರು ಎಂದರು.
ಅನಂತರ ಬಂದಿರುವುದೇ ಗಬ್ಬರ್‌ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ). ರಾಜ್ಯದ ಸಿದ್ಧರಾಮಯ್ಯ ಸರಕಾರ ಕೇವಲ 5ರೂ.ಗೆ ತಿಂಡಿ, 10ರೂ.ಗೆ ಅಪರಾಹ್ನ ಮತ್ತು ರಾತ್ರಿಯ ಊಟ ನೀಡಿದರೆ, ಮೋದಿ ಸರಕಾರ ಬಡವರು ಉಣ್ಣುವ ಊಟಕ್ಕೆ ಶೇ.18 ಜಿಎಸ್‌ಟಿ ವಿಧಿಸಿದೆ ಎಂದವರು ಟೀಕಿಸಿದರು.
ಜನ ನಮಗೆ ಆಳಲು ಅವಕಾಶ ನೀಡಿದಾಗ, ನಾವು ಜನರಿಗಾಗಿ ಅತ್ಯುತ್ತಮ ಆಡಳಿತ ನೀಡಿದ್ದೇವೆ. ಆದರೆ ಮೋದಿ, ತಾನು ನೀಡಿದ ಯಾವೊಂದು ಭರವಸೆಯನ್ನು ಈಡೇರಿಸದೇ, ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿ ಜನರ ಕೋಮುಭಾವನೆ ಪ್ರಚೋದನೆಗೆ ಮುಂದಾಗಿದೆ ಎಂದು ದೂರಿದರು.
ಈ ದೇಶದಲ್ಲಿ ಕಾಂಗ್ರೆಸ್ ಜನರನ್ನು ಹಾಗೂ ದೇಶವನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದರೆ, ಬಿಜೆಪಿ ಜನರನ್ನು ವಿಭಜಿಸುವ ತಂತ್ರ ಮಾಡುತ್ತದೆ ಎಂದು ವೇಣುಗೋಪಾಲ್ ನುಡಿದರು.
ಅಧಿಕಾರ ಸ್ವೀಕಾರ: ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಗಿ ಜನಾರ್ದನ ತೋನ್ಸೆ ಇಂದು ಅಧಿಕಾರ ಸ್ವೀಕರಿಸಿದರು. ಅವರಿಗೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿಯವರು ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಕೇಂದ್ರ ಚುನಾವಣಾ ಸಮಿತಿ ಉಸ್ತುವಾರಿ ಆಸ್ಕ್ಕರ್ ಫೆರ್ನಾಂಡೀಸ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಕೆಪಿಸಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಜಿ.ಎ. ಬಾವ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ವಿನಯಕುಮಾರ್ ಸೊರಕೆ, ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಭಂಡಾರಿ, ಜನಪ್ರತಿನಿಧಿಗಳು, ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







