ಹೊಳೆಯಲ್ಲಿ ಮುಳುಗಿ ಬಾಲಕ ಮೃತ್ಯು
ಕೋಟ, ನ.6: ಹೊಳೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೌಡ ಎಂಬಲ್ಲಿ ಇಂದು ಬೆಳಗ್ಗೆ 11:30ರ ಸುಮಾರಿಗೆ ನಡೆದಿದೆ.
ಮೃತರನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಆದರ್ಶ್(14) ಎಂದು ಗುರುತಿಲಾಗಿದೆ. ಈತ ಶಾಲೆ ರಜೆಯ ಹಿನ್ನೆಲೆಯಲ್ಲಿ ತನ್ನ ಗೆಳೆಯರಾದ ಲವ, ಕುಶ, ಗಣೇಶ್ ಎಂಬವರ ಜೊತೆ ವಾರಾಹಿ ನದಿಗೆ ಈಜಲು ಹೋಗಿದ್ದನು. ಅಲ್ಲಿ ನೀರಿನಲ್ಲಿ ಆಡುತ್ತಿರುವಾಗ ಸರಿಯಾಗಿ ಈಜು ಬಾರದ ಆದರ್ಶ್ ನೀರಿನಲ್ಲಿ ಮುಳುಗಿದನು.
ಕೂಡಲೇ ಇತರರು ಬೊಬ್ಬೆ ಹಾಕಿ ಸ್ಥಳೀಯರನ್ನು ಕರೆದು ಆದರ್ಶ್‌ಗಾಗಿ ಹುಡುಕಾಟ ನಡೆಸಿದರು. ಅದೇ ಸ್ಥಳದಲ್ಲಿ ಪತ್ತೆಯಾದ ಆದರ್ಶ್ ತೀವ್ರ ಅಸ್ವಸ್ಥ ಗೊಂಡು ಮೃತಪಟ್ಟ. ಈತ ಬಿದ್ಕಲ್‌ಕಟ್ಟೆ ಪ್ರೌಢಶಾಲೆಯ 9ನೆ ತರಗತಿಯ ವಿದ್ಯಾರ್ಥಿ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





