ವಿದ್ಯೆ, ಸಂಸ್ಕಾರ ಸೇರಿದರೆ ಹಾಲು ಜೇನಿನಂತೆ: ಚೈತ್ರಾ ಶ್ರೀ
ಚಿಕ್ಕಮಗಳೂರು, ನ.6: ವಿದ್ಯೆಗೆ ಸಂಸ್ಕಾರ ಸೇರಿದಾಗ ಹಾಲಿಗೆ ಜೇನು ಬೆರೆಸಿದಂತೆ. ಪುರಾತನ ಆಚರಣೆಗಳು ವೈಜ್ಞಾನಿಕತೆಯಿಂದ ಕೂಡಿದ್ದು, ಇದರ ಅರಿವು ನಮಗಿರಬೇಕು ಎಂದು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸಿ.ಎಸ್.ಚೈತ್ರಾಶ್ರೀಚೇತನ್ ಹೇಳಿದ್ದಾರೆ.
ಅಕ್ಕಮಹಾದೇವಿ ಮಹಿಳಾ ಸಂಘದ ಕಲ್ಯಾಣನಗರ ಶರಣೆ ಮಾದಲಾಂಬಿಕೆ ತಂಡ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗೌರಿಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ಸಂಸ್ಕೃತಿಯ ಆಚರಣೆಗಳನ್ನು ಅರಿತು ಪಾಲಿಸುವುದರಲ್ಲಿ ಒಳಿತಿದೆ. ವಿದೇಶಿಯರು ನಮ್ಮ ದೇಶಕ್ಕೆ ಬಂದು ಸಂಸ್ಕೃತಿ-ಸಂಸ್ಕಾರವನ್ನು ಅಧ್ಯಯನ ಮಾಡುತ್ತಿರುವಾಗ ನಾವು ಮರೆಯುತ್ತಿರುವುದು ಸರಿಯಲ್ಲ ಎಂದರು.
ಹುಣ್ಣಿಮೆ ಬೆಳಕಿನ ಸಂಕೇತ. ನಮ್ಮ ಎಲ್ಲ ಹಬ್ಬ-ಹುಣ್ಣಿಮೆ ಆಚರಣೆಗಳು ವೈಜ್ಞಾನಿಕ ಆಲೋಚನೆಗಳಿಂದ ಕೂಡಿವೆ. ಮುತ್ತೈದೆಯರು ಧರಿಸುವ ಕುಂಕುಮ, ಮೂಗುತಿ, ಬಳೆ, ತಾಳಿ, ಕಾಲುಂಗುರ ರಕ್ತಸಂಚಲನಕ್ಕೆ ನೆರವಾಗುವುದರ ಜೊತೆಗೆ ಋಣಾತ್ಮಕ ಭಾವನೆ ಗಳನ್ನು ಸುಪ್ತಮನಸ್ಸಿನಲ್ಲಿ ಮೂಡಿಸುತ್ತವೆ. ಸೂರ್ಯನ ಶಾಖವನ್ನು ಹೀರಿಕೊಂಡು ದೇಹವನ್ನು ತಂಪಾಗಿಸುವ ವಿಭೂತಿ. ಎದೆ ಮೇಲಿರುವ ಬೆಳ್ಳಿಕರಡಿಗೆ ಹೃದಯಬಡಿತ ಸುಸ್ಥಿತಿಗೆ ತರುತ್ತದೆ. ಇಷ್ಟಲಿಂಗಪೂಜೆ ಮನಸ್ಸನ್ನು ಕೇಂದ್ರೀಕರಿಸಲು ಸಹಕಾರಿ ಎಂದರು.
ಬಹುತೇಕ ನಮ್ಮ ಪದ್ಧತಿಗಳು ವೈಜ್ಞಾನಿಕ ಮತ್ತು ವೈಚಾರಿಕ ಅಂಶಗಳನ್ನು ಒಳಗೊಂಡಿವೆ. ವಿದ್ಯೆ ನಮ್ಮತನವನ್ನು ಕಲಿಸಬೇಕು. ವಿದ್ಯೆಗೆ ವಿನಯವೇ ಭೂಷಣ ಎಂಬುದನ್ನು ಅರಿಯಬೇಕು. ವಿದ್ಯೆ ಜೀವನ ವೌಲ್ಯಗಳನ್ನು ತಿಳಿಸುವಂತಾಗಬೇಕು. ನಾನು ಎಂಬ ಅಹಂಕಾರದಿಂದ ದೂರವಿಡಬೇಕು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಮಕ್ಕಳ ಮೂಲಕ ಮುಂದುವರಿಸಬೇಕು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಜೀವನದ ಶಿಕ್ಷಣ ಮನೆಗಳಲ್ಲಿ ನೀಡುವಂತಾಗಬೇಕು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಕುರಿತಂತೆ ಉಪನ್ಯಾಸಕಿ ಸುಜಾತಾ ಜಗದೀಶ್ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆ ಹಿನ್ನೆಲೆಯಲ್ಲಿ ವಿಶಾಲ ಕರ್ನಾಟಕ ಜನ್ಮತಾಳಿದೆ. ಕರ್ನಾಟಕದಲ್ಲಿ ಕನ್ನಡ ಉಳಿವಿಗೆ ಹೋರಾಟ ನಡೆಯುತ್ತಿರುವುದು ವಿಷಾದನೀಯ. ಕನ್ನಡದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ಅಭಿಮಾನ ತಾಳಬೇಕು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಚನ ಗಾಯನ, ಸಾಂಸ್ಕೃತಿ ಕಾರ್ಯಕ್ರಮ ನಡೆದವು. ಆಟೋಟ ಸ್ಪರ್ಧಾ ವಿಜೇತರಿಗೆ ಯಮುನಾ ಚಂದ್ರಶೇಖರ್ ಬಹುಮಾನ ವಿತರಿಸಿದರು.
ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಕಾರ್ಯದರ್ಶಿ ಹೇಮಲತಾ, ಖಜಾಂಚಿ ಯುಮುನಾ ಸಿ.ಶೆಟ್ಟಿ, ಪದಾಧಿಕಾರಿಗಳಾದ ಭಾರತಿ ಶಿವರುದ್ರಪ್ಪ, ರೇಖಾ ಉಮಾಶಂಕರ್ ಇದ್ದರು. ಅನುಸೂಯಾ ನಿರೂಪಿಸಿ, ಪ್ರೇಮಾ ಪ್ರಾರ್ಥಿಸಿ, ಮಮತಾ ಸ್ವಾಗತಿಸಿ, ರೂಪಾ ವಂದಿಸಿದರು.







