ಕನಕದಾಸರ ಕೀರ್ತನೆ ಸಾರ್ವಕಾಲಿಕ: ಟಿ.ಪಿ.ರಮೇಶ್

ಮಡಿಕೇರಿ, ನ.6: ಕಾವ್ಯ ಮತ್ತು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಸಂತಶ್ರೇಷ್ಠ, ದಾರ್ಶನಿಕ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಕನಕದಾಸರು ಹಾಗೂ ಪುರಂದರ ದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿನ ಅಸಮಾನತೆ ಭಾವನೆಗಳು ಕಡಿಮೆಯಾದವು ಎಂದರು.
ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಅಧಿಕಾರಿ ಕೆ.ವಿ. ಸುರೇಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಗಂಗಾಧರ ಮಾತನಾಡಿದರು.
ಕನಕದಾಸರ ಜೀವನ ಚರಿತ್ರೆ ಕುರಿತು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೆರಾಜೆ ಜ್ಯೋತಿ ಪ್ರೌಢಶಾಲೆಯ ಕೃಪಾ(ಪ್ರಥಮ), ಗಾಳಿಬೀಡು ಸರಕಾರಿ ಪ್ರೌಢಶಾಲೆಯ ಕೆ.ಎಸ್.ವರಿಷ್ಮಾ (ದ್ವಿತೀಯ), ಮೂರ್ನಾಡು ಸರಕಾರಿ ಪ್ರೌಢಶಾಲೆಯ ಪಿ.ಎಂ.ಭವ್ಯಾ(ತೃತೀಯ), ಚೆಂಬು ಸರಕಾರಿ ಪ್ರೌಢಶಾಲೆಯ ಬಿ.ಆರ್. ಶ್ರದ್ಧಾ ಮತ್ತು ಚೆಟ್ಟಳ್ಳಿ ಸರಕಾರಿ ಪ್ರೌಢಶಾಲೆಯ ಕೆ.ಎಚ್. ಹರ್ಷನಾ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ತಹಶೀಲ್ದಾರ್ ಕುಸುಮಾ, ಪೊಲೀಸ್ ವೃತ್ತನಿರೀಕ್ಷಕ ಮೇದಪ್ಪ, ಜಿಪಂ ಇಂಜಿನಿಯರ್ ರಾಜಕುಮಾರ್ ರೆಡ್ಡಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್, ತಾಪಂ ಇಒ ಜೀವನ್‌ಕುಮಾರ್, ಡಯಟ್ ಉಪನ್ಯಾಸಕರಾದ ಮಲ್ಲೆಸ್ವಾಮಿ, ನಳಿನಾಕ್ಷಿ, ಕಾರ್ಮಿಕ ಇಲಾಖೆ ಅಧಿಕಾರಿ ಯತ್ನಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು. ರಾಘವೇಂದ್ರ ಪ್ರಸಾದ್ ಮತ್ತು ತಂಡದವರು ನಾಡಗೀತೆ ಹಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಸಾವಿತ್ರಿ ವಂದಿಸಿದರು.







