ಚಿಕ್ಕಮಗಳೂರು: ನ.8ಕ್ಕೆ ನೋಟು ಅಮಾನ್ಯ ವಿರುದ್ಧ ಕರಾಳ ದಿನ
ಚಿಕ್ಕಮಗಳೂರು, ನ.6: ಪ್ರಧಾನಿ ಮೋದಿ ಜನತೆಗೆ ಅನೇಕ ಭರವಸೆಗಳ ಮೂಲಕ ಗರಿಷ್ಠ ಮುಖಬೆಲೆಯ ನೋಟು ಅಮಾನ್ಯಗೊಳಿಸಿ ನ.8ಕ್ಕೆ ಒಂದು ವರ್ಷ ಸಂದಿದ್ದು, ಪ್ರಧಾನಿಯ ಎಲ್ಲ ಭರವಸೆಗಳು ಹುಸಿಯಾಗಿ ದೇಶದ ಜನತೆ ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ಎಡಪಕ್ಷಗಳು ಕರಾಳ ದಿನವಾಗಿ ಆಚರಿಸಲಿವೆ ಎಂದು ಸಿಪಿಐನ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ತಿಳಿಸಿದ್ದಾರೆ.
ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷದ ನ.8ರಂದು ರಾತ್ರಿ ನೋಟು ಅಮಾನ್ಯವನ್ನು ಪ್ರಧಾನಿ ಮೋದಿ ಘೋಷಿಸಿ ಕಪ್ಪುಹಣ, ಭ್ರಷ್ಟಾಚಾರ ನಿಯಂತ್ರಣ ಮುಂತಾದ ಭರವಸೆ ನೀಡಿದ್ದರು. ನಂತರದ ಒಂದು ವರ್ಷದ ಅವಧಿಯನ್ನು ಅವಲೋಕಿಸಿದರೆ ಈ ಎಲ್ಲ ಭರವಸೆಗಳು ಸುಳ್ಳಾಗಿದ್ದು, ಜನತೆಗೆ ಲಾಭ ಮಾಡಿಕೊಡುವ ಹೆಸರಲ್ಲಿ ಇನ್ಯಾರಿಗೋ ಲಾಭ ಮಾಡಿದ ಕೃತ್ಯ ಇದಾಗಿದೆ ಎಂದು ಟೀಕಿಸಿದರು.
ದೇಶದ ಜನರನ್ನು ನಂಬಿಸಿ ನೋಟು ಅಮಾನ್ಯ ಗೊಳಿಸಲಾಗಿದ್ದು, ಆದರೆ ಅವರ ಭರವಸೆಯ ತದ್ವಿರುದ್ಧ ಪರಿಣಾಮಗಳು ದೇಶದಲ್ಲಾಗಿವೆ. ಅಂಕಿ ಅಂಶಗಳು, ನಡೆದ ಘಟನೆಗಳು, ಇಂದಿನ ವಾತಾವರಣ ಗಮನಿಸಿದರೆ ಪ್ರಧಾನಿ ಭರವಸೆ ಸಂಪೂರ್ಣ ಸುಳ್ಳಾಗಿದೆ ಎಂಬುವುದು ಮನವರಿಕೆಯಾಗುತ್ತದೆ ಎಂದರು.
ದೇಶ ಆಳುವವರು ಸುಳ್ಳಿನ ಮೂಲಕ ಜನತೆಯನ್ನು ನಂಬಿಸಿ ದಿಕ್ಕು ತಪ್ಪಿಸಬಾರದು ಎಂದು ಒತ್ತಾಯಿಸುವುದಾಗಿ ಹೇಳಿದರು.
ಮತ್ತೋರ್ವ ಮುಖಂಡ ಬಿ. ಅಮ್ಜದ್ ಮಾತನಾಡಿ, ಮೋದಿ ಸರಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ನೋಟು ರದ್ದತಿಯ ಪರಿಣಾಮ ಶೇ.33ರಷ್ಟು ಉದ್ಯೋಗ ಕಡಿತಗೊಂಡಿದೆ. ಬೆಲೆ ಏರಿಕೆ ನಿರಂತರ ವಾಗಿದೆ. ಶಿಕ್ಷಣ, ಖಾಸಗೀಕರಣಗೊಳ್ಳುತ್ತಿದೆ. ಈ ಎಲ್ಲ ವೈಫಲ್ಯಗಳನ್ನು ಮರೆಮಾಚಲು ಮೋದಿ ಸರಕಾರ ವಿಷಯ ಹರಿಯಬಿಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐನ ಮತ್ತೋರ್ವ ಮುಖಂಡ ಜಾರ್ಜ್ ಆಸ್ಟಿನ್ ಉಪಸ್ಥಿತರಿದ್ದರು.







