ಮಿಥುನ್ ರೈಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ತರಾಟೆ

ವೇಣುಗೋಪಾಲ್ - ಮಿಥುನ್ ರೈ
ಮಂಗಳೂರು, ನ. 7: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು ಪಕ್ಷದ ರಾಜ್ಯ ಉಸ್ತುವಾರಿ ಎದುರು ಮುಖಭಂಗ ಅನುಭವಿಸಿದ ಘಟನೆ ಸೋಮವಾರ ನಡೆದಿದೆ.
ಮೂಡುಬಿದಿರೆಯಲ್ಲಿ ಶಾಸಕ ಅಭ್ಯರ್ಥಿ ಸ್ಥಾನಕ್ಕೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮತ್ತು ಮಿಥುನ್ ರೈ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದ್ದು, ಇತ್ತೀಚೆಗೆ ಸಿಎಂ ಆಗಮಿಸಿದಗಲೂ ಬಜಪೆ ವಿಮಾನ ನಿಲ್ದಾಣದಲ್ಲಿ ಎರಡೂ ಬಣಗಳ ನಡುವಿನ ವೈಮನಸ್ಸು ಬಯಲಾಗಿತ್ತು. ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಎದುರಲ್ಲೂ ಮತ್ತೆ ಇಂತಹ ಪ್ರಸಂಗ ನಡೆಯಿತು.
ವೇಣುಗೋಪಾಲ್ ಅವರು ಕಾವೂರಿನಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಮುಗಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದಾಗ ಮಿಥುನ್ ರೈ ಬಣ ಬಲ ಪ್ರದರ್ಶನಕ್ಕೆ ಮುಂದಾಗಿತ್ತು ಎನ್ನಲಾಗಿದ್ದು, ಈ ನಡುವೆ ಯುವ ಕಾಂಗ್ರೆಸ್ ಅಧ್ಯಕ್ಷ ವೇಣುಗೋಪಾಲ್ ರಿಗೆ ಮನವಿ ಪತ್ರ ನೀಡಲು ಮುಂದಾಗಿದ್ದು, ಈ ಸಂದರ್ಭ ಆಕ್ರೋಶಗೊಂಡ ವೇಣುಗೋಪಾಲ್ "ಈ ರೀತಿ ಅಶಿಸ್ತು ತೋರಿಸಿದರೆ ಸಸ್ಪೆಂಡ್ ಮಾಡಬೇಕಾದೀತು" ಎಂದು ಎಚ್ಚರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇದಕ್ಕೂ ಮೊದಲು ಕಾವೂರಿನಲ್ಲಿ ಅಭಿಯಾನಕ್ಕೆ ತೆರಳಿದಾಗಲೂ ಮಿಥುನ್ ರೈ ಬಣಕ್ಕೆ ಅಶಿಸ್ತು ತೋರಿಸಬೇಡಿ ಎಂದು ಎಚ್ಚರಿಕೆ ನೀಡಿದ್ದರು ಎಂದು ಕಾಂಗ್ರೆಸ್ ಮುಖಂಡರಿಂದ ತಿಳಿದುಬಂದಿದೆ.
ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಕೆಲಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಚುರುಕು ಮುಟ್ಟಿಸಿದ್ದು, ಸೋಮವಾರ ಮಧ್ಯಾಹ್ನ 16 ಬ್ಲಾಕ್ ಅಧ್ಯಕ್ಷರು, 16 ಮಂದಿ ಕೆಪಿಸಿಸಿ ಸದಸ್ಯರು, ಶಾಸಕರು, 13 ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆ ನಡೆಸಿದರಲ್ಲದೆ, ಪಕ್ಷ ಸಂಘಟನೆಯ ಕೆಲಸದಲ್ಲಿ ಉದಾಸೀನ ತೋರದೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿರುವುದಾಗಿ ಮಾಹಿತಿ ದೊರಕಿದೆ.







