ದಾರ್ಶನಿಕರ ಸಂದೇಶಗಳು ಬದುಕಿಗೆ ದಾರಿ ದೀಪ: ಸಿ.ಟಿ. ರವಿ

ಚಿಕ್ಕಮಗಳೂರು, ನ.6: ದಾರ್ಶನಿಕರು ನೀಡಿರುವ ಸಂದೇಶಗಳು ಇಂದಿನ ಪೀಳಿಗೆಗೆ ದಾರಿ ದೀಪ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮೌಲ್ಯಯುತ ಬದುಕನ್ನು ಸಾಗಿಸಲು ಸಾಧ್ಯ ಎಂದು ಶಾಸಕ ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ 530ನೆ ಕನಕ ದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾರ್ಶನಿಕರು ಅಂದು ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ಮೇಲು-ಕೀಳು ಎಂಬ ಭಾವನೆಗಳನ್ನು ತಮ್ಮ ಕೀರ್ತನೆಗಳು, ವಚನಗಳ ಮೂಲಕ ಸಾರಿ ಈ ವ್ಯವಸ್ಥೆಯನ್ನು ತೊಡೆದು ಹಾಕಲು ಶ್ರಮಿಸಿದ್ದಾರೆ. ಹುಟ್ಟುವಾಗ ಯಾರೂ ಕೂಡ ಇಂತಹ ಜಾತಿಯಲ್ಲೇ ಹುಟ್ಟುತ್ತೇನೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಯಾರು ಕೂಡ ಜಾತಿಯಿಂದ ಶ್ರೇಷ್ಠರಾಗಲು ಸಾಧ್ಯವಿಲ್ಲ, ಪ್ರತಿಯೊಬ್ಬರು ದಾರ್ಶನಿಕರು ನೀಡಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕ ದಾಸರು ಹರಿದಾಸ ಸಾಹಿತ್ಯದಲ್ಲಿ ಶ್ರೇಷ್ಠ ಸಾಹಿತಿಗಳು. ತಮ್ಮ ಕೀರ್ತನೆ ಸಾಹಿತ್ಯದ ಮೂಲಕ ಅಂದು ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕಲು ಶ್ರಮಿಸಿದರು. ನೂರಕ್ಕೂ ಹೆಚ್ಚು ಕೀರ್ತನೆ ಹಾಗೂ ಸಾಹಿತ್ಯ ರಚಿಸಿದ್ದಾರೆ, ಅವರ ಸಂದೇಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಅರಣ್ಯ ವಸತಿ, ವಿಹಾರ ಧಾಮಗಳ ನಿಗಮದ ಅಧ್ಯಕ್ಷ ಎ. ಎನ್. ಮಹೇಶ್ ಮಾತನಾಡಿ, ಕನಕ ದಾಸರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ, ಕನಕ ದಾಸರು ನಳ ಚರಿತ್ರೆ, ಹರಿ ಭಕ್ತಿಸಾರ, ರಾಮ ಧಾನ್ಯ ಚರಿತ್ರೆ, ಮೋಹನ ತರಂಗಿಣಿಗಳನ್ನು ರಚಿಸಿದ್ದಾರೆ ಈ ಕೃತಿಗಳಲ್ಲಿ ಸಮಾಜದ ಅಂಕು ಡೊಂಕುಗಳ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಶಿವಮೊಗ್ಗದ ಸಾಹಿತಿ ಪ್ರೊ.ಕೆ.ಓಂಕಾರಪ್ಪ ಕನಕ ದಾಸರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್‍ಸಿ ಶ್ರೀಮತಿ ಮೋಟಮ್ಮ, ನಗರಸಭೆ ಅಧ್ಯಕ್ಷೆ ಶಿಲ್ಪ ರಾಜಶೇಖರ್, ತಾಪಂ ಅಧ್ಯಕ್ಷ ಈ.ಆರ್. ಮಹೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಶಾಂತೇಗೌಡ, ಮಾಜಿ ಎಂಎಲ್‍ಸಿ ಗಾಯತ್ರಿ ಶಾಂತೇಗೌಡ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ರವೀಂದ್ರ ಬೆಳವಾಡಿ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ವಿಭಾಗಧಿಕಾರಿ ಸಂಗಪ್ಪ ಭಾಗವಹಿಸಿದ್ದರು.







