ಅಂತಿಮ ದಿನ ಚಿನ್ನ ಜಯಿಸಿದ ಸತ್ಯೇಂದ್ರ, ಸಂಜಯ್‌ಗೆ ಬೆಳ್ಳಿ
ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್

ಗೋಲ್ಡ್ ಕೋಸ್ಟ್(ಆಸ್ಟ್ರೇಲಿಯ), ನ.6: ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಅಂತಿಮ ದಿನವಾಗಿರುವ ಸೋಮವಾರ ಪುರುಷರ 50 ಮೀಟರ್ ರೈಫಲ್ 3 ಪೋಸಿಷನ್‌ನಲ್ಲಿ ಭಾರತದ ಸತ್ಯೇಂದ್ರ ಸಿಂಗ್ ಚಿನ್ನ ಮತ್ತು ಸಂಜಯ್ ರಜಪೂತ್ ಬೆಳ್ಳಿ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತ ಒಟ್ಟು 20 ಪದಕಗಳನ್ನು ಗೆದ್ದುಕೊಂಡು ಕೂಟದಲ್ಲಿ ಅಭಿಯಾನ ಅಂತ್ಯಗೊಳಿಸಿದೆ.
ಭಾರತದ ತಂಡ 6 ಚಿನ್ನ, 7 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಸತ್ಯೇಂದ್ರ, ಸಂಜಯ್ ರಜಪೂತ್ ಮತ್ತು ಚೈನಾ ಸಿಂಗ್ ಅವರು ಪುರುಷರ 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದರು. ಒಟ್ಟು 8 ಮಂದಿ ಫೈನಲ್‌ನ ಸ್ಪರ್ಧಾ ಕಣದಲ್ಲಿದ್ದರು.
ಸತ್ಯೇಂದ್ರ ಸಿಂಗ್ 1,162 ಅಂಕಗಳೊಂದಿಗೆ ಎರಡನೆ ಸ್ಥಾನ, ರಜಪೂತ್(1,158) ಮೂರನೆ ಮತ್ತು ಚೈನಾ ಸಿಂಗ್(1,158) ಅಂಕ ಪಡೆದು ನಾಲ್ಕನೆ ಸ್ಥಾನದೊಂದಿಗೆ ಫೈನಲ್ ತಲುಪಿದ್ದರು.
ಸತ್ಯೇಂದ್ರ ಸಿಂಗ್ ಫೈನಲ್‌ನಲ್ಲಿ 454.2 ಅಂಕ ದಾಖಲಿಸಿ ಮೊದಲ ಸ್ಥಾನದೊಂದಿಗೆ ಚಿನ್ನ ಪಡೆದರು. ರಜಪೂತ್ (453.3) ಬೆಳ್ಳಿ ಪಡೆದರು. ಚೈನಾ ಸಿಂಗ್ ಮೂರನೆ ಸ್ಥಾನ ಪಡೆಯುವಲ್ಲಿ ವಿಫಲರಾದರು. ಅವರನ್ನು ಹಿಂದಿಕ್ಕಿದ ಆಸ್ಟ್ರೇಲಿಯದ ಡ್ಯಾನೆ ಸ್ಯಾಂಪ್ಸನ್ ಕಂಚು ಗೆದ್ದುಕೊಂಡರು. ಸ್ಯಾಂಪ್ಸನ್ ಅವರು ಪುರುಷರ ರೈಫಲ್ ಪ್ರೋನೆ ಗೋಲ್ಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಅವರು ಒಟ್ಟು 1 ಚಿನ್ನ ಮತ್ತು 1 ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪುರುಷರ ಟ್ರಾಪ್ ಇವೆಂಟ್‌ನ ಶಾಟ್‌ಗನ್ ಸ್ಪರ್ಧೆಯಲ್ಲಿ ಬೀರೆನ್‌ದೀಪ್ ಸೋಧಿ ಅಂತಿಮ ಹಂತ ತಲುಪಿದ್ದ ಭಾರತದ ಏಕೈಕ ಶೂಟರ್ ಆಗಿದ್ದರೂ, ಅವರಿಗೆ ಕಂಚು ಕೈತಪ್ಪಿತು. ನಾಲ್ಕನೆ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದರು.







