ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಎಲ್ಲಾ ವರ್ಗದ ಜನರಿಗೆ ತಲುಪಿದೆ: ಆರಾಧ್ಯ

ಹೊನ್ನಾವರ, ನ.6: ರಾಜ್ಯ ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳು ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪಿದ್ದು, ಸರಕಾರದ ಕಾರ್ಯಕ್ರಮಗಳು ಕಟ್ಟಕಡೆಯ ಜನರಿಗೂ ಸಿಗುವಂತೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕೆಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಆರಾಧ್ಯ ವಿ.ಎಸ್. ಕರೆ ನೀಡಿದ್ದಾರೆ.
ಹೆರಂಗಡಿ ಪಂಚಾಯತ್ ಕಾಂಗ್ರೆಸ್ ಘಟಕ ಹಾಗೂ ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅಳ್ಳಂಕಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ.ಅಲ್ಲದೆ, ರಾಜ್ಯದ ಎಲ್ಲಾ ರೈತರ 50 ಸಾವಿರವರೆಗಿನ ರೈತರ ಸಾಲ ಮನ್ನಾ ಮಾಡಿ ವಿಶೇಷ ಸಾಧನೆ ಮಾಡಿದೆ. ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪುನಃ ಆಶೀರ್ವಾದ ಮಾಡುವರೆಂಬ ವಿಶ್ವಾಸವನ್ನು ಇದೇ ವೇಳೆ ವ್ಯಕ್ತಪಡಿಸಿದರು.
ಚಂದ್ರಕಾಂತ ಕೊಚರೇಕರ್ ಮಾತನಾಡಿ, ಭೂತ್‍ಗಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಮಂಕಾಳು ವೈದ್ಯರ ವಿಶೇಷ ಪ್ರಯತ್ನದಿಂದ ಹಿಂದೆಂದೂ ಆಗದ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಈ ಬಾರಿ ರಾಜ್ಯ ಸರ್ಕಾರ ಮಂಜೂರಿ ಮಾಡಿದೆ. ನೂರಾರು ಕೋಟಿ ವೆಚ್ಚದ ಹಲವು ಸೇತುವೆ ಕಾಮಗಾರಿಗಳು ಈ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಕುಗ್ರಾಮಗಳಿಗೆ ವಿದ್ಯತ್ ಸೌಲಭ್ಯ ಒದಗಿಸಲಾಗಿದೆ. ಹೈಗುಂದ ಸಹಿತ ಹಲವಾರು ದ್ವೀಪ ಪ್ರದೇಶಗಳಿಗೆ ಇದೇ ಮೊದಲ ಬಾರಿಗೆ ಸೇತುವೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಜಿ.ಪಂ ಸದಸ್ಯೆ ಪುಷ್ಪಾ ನಾಯ್ಕ, ತಾ.ಪಂ ಸದಸ್ಯ ಲೋಕೇಶ ನಾಯ್ಕ ಮಾತನಾಡಿದರು. ಸ್ಥಳೀಯ ಜಿ.ಪಂ ಸದಸ್ಯೆ ಸವಿತಾ ಗೌಡ, ಮಾಜಿ ಜಿ.ಪಂ ಸದಸ್ಯ ಕೃಷ್ಣ ಗೌಡ, ಡಿಸಿಸಿ ಸದಸ್ಯರಾದ ವಾಮನ ನಾಯ್ಕ, ಯೋಗೇಶ ರಾಯ್ಕರ್, ನಾಮದೇವ, ಅಂಕೋಲೇಕರ್ ಗ್ರಾಮ ಪಂಚಾಯತ್ ಅಧ್ಯಕ್ಷ ಈಶ್ವರ ಎನ್. ನಾಯ್ಕ ಕುದ್ರಿಗಿ, ಸುರೇಶ ನಾಯ್ಕ ತುಂಬೊಳ್ಳಿ, ಸ್ಥಳೀಯ ಘಟಕದ ರಾಮಕೃಷ್ಣ ಹೆಗಡೆ, ರವಿ ಫರ್ನಾಂಡಿಸ್, ಅಲ್ಲಾವುದ್ದೀನ್ ಕುರ್ವೆ ಮತ್ತಿತರರು ಉಪಸ್ಥಿತರಿದ್ದರು.







