ನ.11ರಿಂದ ಪಡುಬಿದ್ರೆಯಲ್ಲಿ ರಾಜ್ಯಮಟ್ಟದ ಕರಾಟೆ

ಪಡುಬಿದ್ರೆ, ನ. 7: 28ನೇ ರಾಜ್ಯಮಟ್ಟದ ಅಂತರ್ ಶಾಖಾ ಕರಾಟೆ ಸ್ಪರ್ಧೆಯು ಪಡುಬಿದ್ರೆಯ ಸಾಯಿ ಸಭಾಂಗಣದಲ್ಲಿ ನ.11 ಮತ್ತು 12ರಂದು ನಡೆಯಲಿದೆ. ಕಾಪು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕರಾಟೆ ಮುಖ್ಯ ಶಿಕ್ಷಕ ಪ್ರವೀಣ್ ಕುಮಾರ್ ಮಾಹಿತಿ ನೀಡಿದರು.
ಮಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಲೈಡ್ ಆರ್ಟ್ಸ್ ಕರ್ನಾಟಕದ ವಿವಿಧೆಡೆಗಳಲ್ಲಿ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಭಾರಿ ಪಡುಬಿದ್ರೆಯಲ್ಲಿ ಆಯೋಜಿಸಲಾಗಿದೆ. ರಾಜ್ಯಾದ್ಯಂತ 200ಕ್ಕೂ ಅಧಿಕ ಶಾಖೆಗಳನ್ನು ಒಳಗೊಂಡ ಈ ಸಂಸ್ಥೆಯು 800ಕ್ಕೂ ಅಧಿಕ ಬ್ಲ್ಯಾಕ್ ಬೆಲ್ಟ್‌ಗಳನ್ನು ಹೊಂದಿದ್ದಾರೆ.
ಎರಡು ದಿನಗಳ ಕಾಲ ಪಡುಬಿದ್ರೆಯಲ್ಲಿ ನಡೆಯಲಿರುವ ಕರಾಟೆ ಸ್ಪರ್ಧೆಯಲ್ಲಿ 1500ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯು ವೈಯಕ್ತಿಕ ಕಟಾ, ವೈಯಕ್ತಿಕ ಕುಮಿಟೆ, ತಂಡ ಕಟಾ ಹಾಗೂ ಆಯುಧ ಕಟಾ ಎಂಬ ನಾಲ್ಕು ಮುಖ್ಯ ವಿಭಾಗಗಳು ಇವೆ. ಬೆಲ್ಟ್, ವಯಸ್ಸು ಮತ್ತು ದೇಹ ತೂಕದ ಅನುಗುಣವಾಗಿ ಹಲವಾರು ಉಪವಿಭಾಗಗಳಿವೆ. ಒಟ್ಟು 215 ಸ್ಪರ್ಧೆಗಳು ಜರಗಲಿದ್ದು, 750 ಪದಕಗಳನ್ನು ಗೆಲ್ಲುವ ಸ್ಪರ್ಧಿಗಳಿಗಿವೆ. ಕುಮಿಟೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಸ್ಪರ್ಧಿಗಳು ಗ್ರ್ಯಾಂಡ್ ಚಾಂಪಿಯನ್ ಸ್ಪರ್ಧೆಗೆ ಪ್ರವೇಶ ಪಡೆಯಲಿದ್ದು, ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ಪ್ರಶಸ್ತಿಗೆ ಪೈಪೋಟಿ ನಡೆಯಲಿದೆ ಎಂದರು.
ನ.11ರಂದು 11ಗಂಟೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಕಾಪು ಶಾಸಕ ವಿನಯಕುಮಾರ್ ಸೊರಕೆ, ಜಿಲ್ಲಾ ಪಂ. ಅಧ್ಯಕ್ಷ ದಿನಕರ ಬಾಬು ಸಹಿತ ಹಲವು ಭಾಗವಹಿಸಲಿದ್ದಾರೆ. ನ.12ರಂದು ಸಂಜೆ 6ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ, ದಕ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವಣ್ ಮತ್ತುತರರು ಭಾಗವಹಿಸಲಿದ್ದಾರೆ ಎಂದು ಪ್ರವೀಣ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕ ಅಬ್ದುಲ್ ಖಾದರ್ ಹುಸೈನ್, ರಾಷ್ಟ್ರೀಯ ಕ್ರೀಡಾಪಟು ಪುಂಡಳೀಕ ಹೊಸಬೆಟ್ಟು, ಹಿರಿಯ ಶಿಕ್ಷಕ ದಿನೇಶ್ ಆಚಾರ್ಯ, ಸಂಘಟನಾ ಸಮಿತಿ ಸದಸ್ಯ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.







