ಅನಾಥನಾಗಿ ಕೊನೆಯುಸಿರೆಳೆದ 'ಅವಧ್' ರಾಜಕುಮಾರ
ಜಗತ್ತಿನ ಪಾಲಿಗೆ ನಿಗೂಢವಾಗಿಯೇ ಉಳಿದವರ ಕಥೆಯಿದು...!
.jpeg)
ಹೊಸದಿಲ್ಲಿ, ನ.7: ತನ್ನನ್ನು 'ಅವಧ್' ರಾಜವಂಶದ ರಾಜಕುಮಾರ ಎಂದು ಹೇಳುತ್ತಿದ್ದ ಅಲಿ ರಝಾ ಇತ್ತೀಚೆಗೆ ಮೃತಪಟ್ಟಿದ್ದು, ಇದರೊಂದಿಗೆ 30 ವರ್ಷಗಳ ಕಾಲ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದ ಕಥೆಯೊಂದು ಕೊನೆಗೊಂಡಿದೆ.
ರಝಾ, ಆತನ ಸಹೋದರಿ ಸಕೀನಾ ಹಾಗೂ ತಾಯಿ ಬೇಗಂ ವಿಲಾಯತ್ ಮಹಲ್ ತಮ್ಮನ್ನು 'ಅವಧ್' ರಾಜವಂಶದ ಕೊನೆಯ ನವಾಬ ವಜೀದ್ ಅಲಿ ಶಾ ಅವರ ನೇರ ವಂಶಜರು ಎಂದು 70ರ ದಶಕದಲ್ಲಿ ಹೇಳಿಕೊಂಡಿದ್ದರು. ಅಂದು ಅದು ಭಾರೀ ಸುದ್ದಿಯಾಗಿತ್ತು. ವಿಲಾಯತ್ ಮಹಲ್ ಆಗ ಹೊಸದಿಲ್ಲಿ ರೈಲ್ವೆ ನಿಲ್ದಾಣದ ಪ್ರಥಮ ದರ್ಜೆ ವೈಟಿಂಗ್ ಲಾಂಜ್ ನಲ್ಲಿ ತನ್ನ ಇಬ್ಬರು ಮಕ್ಕಳು, ಹಲವು ನಾಯಿಗಳು ಮತ್ತು ಕೆಲವು ಕೆಲಸದಾಳುಗಳೊಂದಿಗೆ ಕಾಣಿಸಿಕೊಂಡಿದ್ದರು. ನವಾಬನನ್ನು 1856ರಲ್ಲಿ ಪದಚ್ಯುತಿಗೊಳಿಸಿ ಆತನ ಎಲ್ಲಾ ಆಸ್ತಿಗಳನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದಕ್ಕಾಗಿ ಹೇಳಿದ್ದ ವಿಲಾಯತ್ ಮಹಲ್ ಸರಕಾರದೊಂದಿಗೆ ಪರಿಹಾರಕ್ಕೆ ಬೇಡಿಕೆಯಿರಿಸಿದ್ದಳು.
ಕೊನೆಗೆ ಆಕೆಗೆ ಲಕ್ನೋದಲ್ಲಿ ಮನೆಯೊಂದನ್ನು ನೀಡಲಾಯಿತಾದರೂ ತನಗೆ ದಿಲ್ಲಿಯಲ್ಲೇ ಮನೆ ಬೇಕೆಂದು ಪಟ್ಟು ಹಿಡಿದು ರೈಲ್ವೆ ನಿಲ್ದಾಣದಿಂದ ಹೊರನಡೆಯಲು ನಿರಾಕರಿಸಿದ್ದಳು. ಕೊನೆಗೆ ಆಕೆಗೆ ಡಿಡಿಎ ಫ್ಲ್ಯಾಟ್ ಒಂದನ್ನು ನೀಡಲಾಯಿತಾದರೂ ಆಕೆ ಅಲ್ಲಿಗೆ ಹೋಗಲು ನಿರಾಕರಿಸಿದ ನಂತರ ಆಕೆಗೆ 14ನೇ ಶತಮಾನದ ಅರಮನೆಯೊಂದನ್ನು ನೀಡಲಾಯಿತು. ಆ ಸ್ಥಳವನ್ನು ಅರಮನೆಯ ಬದಲು ಬಿಸ್ತದರಿ ಅವಶೇಷಗಳು ಎನ್ನಲಾಗುತ್ತಿತ್ತು. ಸುಲ್ತಾನ್ ಫಿರೋಜ್ ಶಾ ತುಘ್ಲಕ್ ನ ಶಿಕಾರಿಘರ್ ಅದಾಗಿತ್ತು. ಅದು ದಿಲ್ಲಿಯ ಹೃದಯಭಾಗದ ಲುಟ್ಯೆನ್ಸ್ ಪ್ರದೇಶದಲ್ಲಿದ್ದ ಕಾರಣ ಅದನ್ನು 'ಮಾಲ್ಚ ಮಹಲ್' ಎಂದೂ ಕರೆಯಲಾಗುತ್ತಿತ್ತು. ಆದರೆ ಬೇಗಂ ವಿಲಾಯತ್ ಅಲ್ಲಿ ನೆಲೆಸಲು ಆರಂಭಿಸಿದಂದಿನಿಂದ ಅದು 'ವಿಲಾಯತ್ ಮಹಲ್' ಎಂದೇ ಜನಜನಿತವಾಯಿತು. ಆದರೆ ಆರಂಭದಿಂದಲೂ ಕುಟುಂಬ ಇತರರೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ತಮ್ಮ ಮನೆಯ ಹತ್ತಿರ ಯಾರನ್ನೂ ಬರಲು ಬಿಡುತ್ತಿರಲಿಲ್ಲ.
ಈ ಬಗೆಗಿನ ಎಚ್ಚರಿಕಾ ಫಲಕವನ್ನೂ ಹಾಕಲಾಗಿತ್ತು. ಯಾರಾದರೂ ಬಂದರೂ ನಾಯಿಗಳು ಬಂದವರ ಮೇಲೆರಗುತ್ತಿದ್ದವು. ಆದರೆ ನೀರು, ವಿದ್ಯುತ್ ಇಲ್ಲದೆಯೇ ಅವರಿಗೆ ಅಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿತ್ತು. ಸೆಪ್ಟೆಂಬರ್ 10, 1993ರಲ್ಲಿ ಮಹಲ್ ಅತ್ಮಹತ್ಯೆಗೈದ ನಂತರ ಆಕೆಯ ಮಕ್ಕಳು ಖಿನ್ನತೆಗೆ ಜಾರಿದರು. ನಾಲ್ಕು ವರ್ಷಗಳ ಹಿಂದೆ ಸಕೀನಾ ಕೂಡ ಸಾವನ್ನಪ್ಪಿದ ನಂತರ ರಝಾ ಒಬ್ಬಂಟಿಯಾಗಿದ್ದ. ಆಗ ಆತನನ್ನು ಭೇಟಿಯಾಗಲು ಫಾರೆನ್ ಪ್ರೆಸ್ ಕಾರ್ಪ್ಸ್ ಸದಸ್ಯರು ಬರುತ್ತಿದ್ದರು. ಕುಟುಂಬದ ಬಳಿ ಕೇವಲ ಒಂದು ನಾಯಿಯಿತ್ತೆಂದು ಹತ್ತಿರದ ಇಸ್ರೋ ಅರ್ತ್ ಸ್ಟೇಶನ್ ಕಾವಲುಗಾರ ಹೇಳುತ್ತಾನೆ. ಹಲವಾರು ಬಾರಿ ರಝಾ ಸೈಕಲ್ ತುಳಿದು ಮುಖ್ಯ ರಸ್ತೆಯ ಬಳಿ ತೆರಳಿದರೂ ಯಾವತ್ತೂ ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಯಾರೂ ಕಂಡಿಲ್ಲ.
ರಝಾ ಮೃತಪಟ್ಟ ದಿನ ಈ ರಾಜಮನೆತನದ ಮನೆಯೊಳಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಡೈನಿಂಗ್ ಟೇಬಲ್ ನಲ್ಲಿ ಮಾತ್ರ ಕಪ್, ಪ್ಲೇಟುಗಳನ್ನು ಸರಿಯಾಗಿ ಇಡಲಾಗಿತ್ತು. ಒಂದು ಕೆಂಪು ಬಣ್ಣದ ಫೋನ್ ತುಂಡಾಗಿ ಬಿದ್ದಿತ್ತು. ಮೇಜಿನಲ್ಲಿ ದೊಡ್ಡ ಗ್ಲಾಸಿನಲ್ಲಿ ನೀರಿತ್ತು, ಪ್ರಾಯಶಃ ಊಟಕ್ಕೆ ಕುಳಿತಿದ್ದಾಗ ರಝಾ ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದೆ. ಹೊರ ಜಗತ್ತಿನೊಂದಿಗೆ ಸಂಪರ್ಕವಿರದ ರಾಜಮನೆತನದ ಕುಟುಂಬವೊಂದು ಈ ರೀತಿಯ ಅಂತ್ಯ ಕಂಡಿರುವುದು ದುರಂತವೇ ಸರಿ.









