ಪುತ್ತೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆ

ಪುತ್ತೂರು, ನ. 7: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಯಶಸ್ವಿ 8 ನೇ ವರ್ಷದ ಸಂಸ್ಥಪನಾ ದಿನಾಚರಣೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಕೂರ್ನಡ್ಕದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ಸಮಿತಿ ಸದಸ್ಯ ಸಾಧಿಕ್ ಜಾರತ್ತಾರು ಮಾತನಾಡುತ್ತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು, ಸಮಾಜದಲ್ಲಿ ಆಗುವಂತಹ ಅನ್ಯಾಯಗಳನ್ನು ಪ್ರಶ್ನಿಸಲು, ಹೋರಾಟವನ್ನು ರೂಪಿಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉದಯವಾಯಿತು. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಳಿಸಲು ಇಂದು ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಒದಗಿಸಿಕೊಡುತ್ತದೆ ಎಂದು ಹೇಳಿದರು.
ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ ಅಧ್ಯಕ್ಷತೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪುತ್ತೂರು ತಾಲೂಕು ಸಮಿತಿ ಸದಸ್ಯ ನಾಗೇಶ್ ಕುರಿಯ ಹಾಗೂ ದಲಿತ ಹೋರಾಟಗಾರ ದಿ. ಕೂಸಪ್ಪ ಅವರ ಪುತ್ರ ಹರ್ಷಿತ್ ಕುಮಾರ್ ಹಾಗೂ ಪ್ರಮುಖರಾದ ನಾಸಿರ್ ಕಲ್ಲರ್ಪೆ, ಮಸೂದ್ ಕೂರ್ನಡ್ಕ, ಫಾಝಿಲ್ ಪುರುಷರಕಟ್ಟೆ ಉಪಸ್ಥಿತರಿದ್ದರು.
ಕ್ಯಾಂಪಸ್ ಫ್ರಂಟ್ ತಾಲೂಕು ಸಮಿತಿ ಸದಸ್ಯ ಶಿಯಾಬ್ ಬೀಟಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತಾಲೂಕಿನಲ್ಲಿ ಅಂಕತ್ತಡ್ಕ, ಕುಂಬ್ರ, ಸವಣೂರಿನಲ್ಲೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.







