ಸ್ವತಂತ್ರ ಭಾರತ ಎರಡು ದೇಶಗಳಾಗಿ ರೂಪಗೊಂಡಿದೆ: ಕೆ.ರಾಧಾಕೃಷ್ಣ

ಬೆಂಗಳೂರು, ನ.7: ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತವಿಂದು ಬಡ, ಕಾರ್ಮಿಕ ಮತ್ತು ರೈತ ವರ್ಗದ ಭಾರತ ಹಾಗೂ ಶ್ರೀಮಂತ ವರ್ಗದ ಭಾರತ ಎಂಬ ಎರಡು ದೇಶಗಳಾಗಿ ರೂಪಗೊಂಡಿದೆ ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್)ದ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಮಂಗಳವಾರ ನಗರದ ಟೌನ್‌ಹಾಲ್‌ನಲ್ಲಿ ಎಸ್‌ಯುಸಿಐ ನಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಗಳ ಹಿಡಿತದಲ್ಲಿ ಬಂಧಿಯಾಗಿದೆ. ಕೋಟ್ಯಂತರ ಜನತೆಯ ಶ್ರಮವನ್ನು ಬಂಡವಾಳವಾಗಿಸಿಕೊಂಡು ಬಡ, ಹಿಂದುಳಿದ ವರ್ಗಗಳನ್ನು ಮತ್ತಷ್ಟು ಶೋಷಣೆಗೆ ನೂಕುತ್ತಿದ್ದಾರೆ ಎಂದು ಹೇಳಿದರು.
ಇಂದು ಆರ್ಥಿಕ ವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ. ಸಾವಿನಂಚಿನಲ್ಲಿರುವ ಬಂಡವಾಳಶಾಹಿ ವ್ಯವಸ್ಥೆ ಮುಂದೊಂದು ದಿನ ನೆಲಕಚ್ಚಿ, ಸಮಾಜವಾದಿ ವ್ಯವಸ್ಥೆಗೆ ಹೇಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು 19ನೆ ಶತಮಾನದಲ್ಲಿ ಕಾರ್ಮಿಕವರ್ಗದ ನಾಯಕ ಕಾರ್ಲ್‌ಮಾರ್ಕ್ಸ್ ಹೇಳಿದ್ದಾರೆ. ಪ್ರಕೃತಿಯು ಹೇಗೆ ನಿಯಮ ಬದ್ಧವೋ ಅದೇ ರೀತಿ ಮಾನವ ಸಮಾಜವೂ ನಿಯಮಬದ್ಧ. ಪ್ರಕೃತಿಯಲ್ಲಿ ಬದಲಾವಣೆಗಳಾಗುವಂತೆ, ಮಾನವ ಸಮಾಜದಲ್ಲಿಯೂ ಬದಲಾವಣೆ ನಡೆಯುತ್ತದೆ. ಮಾರ್ಕ್ಸ್‌ರ ಈ ಬೋಧನೆಯನ್ನು ಲೆನಿನ್ ಅಭೂತಪೂರ್ವವಾಗಿ ಪ್ರಯೋಗಕ್ಕೆ ಒಳಪಡಿಸಿದ್ದರು ಎಂದು ತಿಳಿಸಿದರು.
ರಷ್ಯಾದ ಸಮಾಜವಾದಿ ರಾಷ್ಟ್ರದ ಪ್ರಯೋಗವನ್ನು ಇಡೀ ಪ್ರಪಂಚ ಪರಿಹಾಸ್ಯ ಮಾಡಿತು. ಅನಾಗರಿಕ ಕಾರ್ಮಿಕರು, ರೈತರು ಸಮಾಜವನ್ನು ಮುನ್ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿತು. ಆದರೆ, ಸಮಾಜವಾದ ಜಾರಿಯಾದ ಕೆಲವೇ ವರ್ಷಗಳಲ್ಲಿ ರಷ್ಯಾ ಅಮೆರಿಕವನ್ನು ಹಿಂದಕ್ಕೆ ಸರಿಸಿ ಮುನ್ನಡೆಯಿತು. ಚಾರ್ಲಿ ಚಾಪ್ಲಿನ್, ಆಲ್ಬರ್ಟ್ ಐನ್‌ಸ್ಟೀನ್, ರವೀಂದ್ರನಾಥ ಠಾಗೂರ್, ಕುವೆಂಪು, ಪ್ರೇಮ್‌ಚಂದ್ ಸೇರಿದಂತೆ ಅನೇಕರು ರಷ್ಯಾ ಸಮಾಜವಾದವನ್ನು ಹೊಗಳಿದು ಎಂದು ಅವರು ಸ್ಮರಿಸಿಕೊಂಡರು.
ಲೆನಿನ್-ರಷ್ಯಾ ಸಮಾಜವಾದಿ ವ್ಯವಸ್ಥೆಯ ಶಿಲ್ಪಿಯಾಗಿದ್ದಾರೆ. ಈ ವ್ಯವಸ್ಥೆಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ಧೀಮಂತ ನಾಯಕ ಸ್ಟಾಲಿನ್. ಆದರೆ, ಸ್ಟಾಲಿನ್‌ರ ಮರಣದ ನಂತರ ರಷ್ಯಾದಲ್ಲಿ ಸಮಾಜವಾದ ನೆಲಕಚ್ಚಿ, ಮತ್ತೊಮ್ಮೆ ಬಂಡವಾಳಶಾಹಿ ವ್ಯವಸ್ಥೆ ಪುನರ್ ರಚನೆಯಾಗಿದೆ. ಆದರೂ, ರಷ್ಯಾದಲ್ಲಿ ಸಮಾಜವಾದದ ಪತನ, ಸಮಾಜವಾದಿ ಸಿದ್ಧಾಂತ ಪತನವಾಗಿಲ್ಲ ಎಂಬುದನ್ನು ಮರೆಯುವಂತಿಲ್ಲ ಎಂದರು.
ಎಸ್‌ಯುಸಿಐನ ಮುಖಂಡರಾದ ಕೆ.ಉಮಾ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನ ವಿರೋಧಿ ನೀತಿಗಳಿಂದ ಸಾಮಾನ್ಯ ಜನರು ಬೇಸತ್ತಿದ್ದಾರೆ, ಈ ಸಮಸ್ಯೆಗೆ ಕೊನೆ ಎಂದು ಎಂಬ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅಧಿಕಾರದಲ್ಲಿರುವವರು ರಾಜಕೀಯ ಭ್ರಮೆಯಲ್ಲಿ ತೇಲುತ್ತಿದ್ದಾರೆ. ಒಳ್ಳೆ ದಿನಗಳು ಬರುತ್ತವೆ ಎಂದು ಹೇಳಿದ ಮೋದಿಯವರ ಸರಕಾರ ಅತ್ಯಂತ ಕೆಟ್ಟ ದಿನಗಳು ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಷ್ಯಾ ಸಮಾಜವಾದಿಯ 100ನೆ ವರ್ಷಾಚರಣೆ ಆಚರಿಸುತ್ತಿದ್ದು, ಇದೇ ಮುಂದಿನ ಚಳವಳಿಗೆ ಸ್ಪೂರ್ತಿಯಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
60 ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‌ನ ಆರ್ಥಿಕ ನೀತಿಗಳನ್ನು ಜನರನ್ನು ವಿನಾಶದ ಅಂಚಿಗೆ ನೂಕಲ್ಪಟ್ಟಿತ್ತು. ಆದರೆ, ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ಸಾಧನೆಯಲ್ಲಿ ಆರು ದಶಕಗಳ ಕಾಲ ಕಾಂಗ್ರೆಸ್ ಸರಕಾರ ಮಾಡಿದ್ದಕ್ಕಿಂತಲೂ ಹೀನಾಯ ಸ್ಥಿತಿಗೆ ಜನರನ್ನು ನೂಕಿದ್ದಾರೆ. ಹೀಗಾಗಿ, ಮತ್ತೊಮ್ಮೆ ಭಾರತ ಬದಲಾವಣೆಯನ್ನು ಬಯಸುತ್ತಿದೆ. ಈ ಸಂದರ್ಭದಲ್ಲಿ ರಷ್ಯಾ ಕ್ರಾಂತಿ ಸ್ಪೂರ್ತಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎಚ್.ವಿ.ದಿವಾಕರ್, ಟಿ.ಎಸ್. ಸುನೀತ್ ಕುಮಾರ್, ರಾಮಾಂಜನಪ್ಪ ಆಲ್ದಳ್ಳಿ, ಸೋಮಶೇಖರ್, ಎಂ.ಎನ್. ಶ್ರೀರಾಮ್, ಶಶಿಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







