ಸ್ಥಳ ಕೊರತೆಯಾದರೆ 'ಮೊಬೈಲ್ ಕ್ಯಾಂಟೀನ್' ಆರಂಭಿಸಿ: ಸಿಎಂ ಸಿದ್ದರಾಮಯ್ಯ
ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ 'ಇಂದಿರಾ ಕ್ಯಾಂಟೀನ್'

ಬೆಂಗಳೂರು, ನ. 7: ಅಗ್ಗದ ದರದಲ್ಲಿ ಬಡ-ಕೂಲಿ ಕಾರ್ಮಿಕರಿಗೆ ಉಪಾಹಾರ ಮತ್ತು ಊಟ ಒದಗಿಸುವ ‘ಇಂದಿರಾ ಕ್ಯಾಂಟೀನ್’ಗಳನ್ನು ರಾಜ್ಯದ ಎಲ್ಲಾ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ ಆರಂಭಿಸಲು ತೀರ್ಮಾನಿಸಿದ್ದು, ಸ್ಥಳದ ಕೊರತೆ ಎದುರಾದರೆ ಬಾಡಿಗೆಗೆ ಅಥವಾ ಮೊಬೈಲ್ ಕ್ಯಾಂಟೀನ್‌ಗೆ ಚಾಲನೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ಆವರಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ, ಬಸ್-ರೈಲ್ವೆ ನಿಲ್ದಾಣ ಸೇರಿ ಜನ ಸಂದಣಿ ಇರುವ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಿರಿ ಎಂದರು.
ಕ್ಯಾಂಟೀನ್ ಸ್ಥಾಪಿಸಲು ಸೂಕ್ತ ಸ್ಥಳ ಗುರುತಿಸಿ, ಇಲ್ಲವಾದರೆ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿ, 1ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರ ಪಟ್ಟಣಗಳಲ್ಲಿ ಜ.1ರಿಂದ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಬೇಕೆಂಬುದು ಸರಕಾರದ ಆಶಯ. ಜನಸಂಖ್ಯೆ ಲಕ್ಷಕ್ಕಿಂತ ಕಡಿಮೆ ಇದ್ದರೂ, ಕೈಕಟ್ಟಿ ಕುಳಿತು ಕೊಳ್ಳಬೇಡಿ. ಅವಶ್ಯಕತೆ ಕಂಡು ಬಂದಲ್ಲಿ ಅಂತಹ ಪ್ರದೇಶದಲ್ಲೂ ಕ್ಯಾಂಟೀನ್ ಪ್ರಾರಂಭ ಮಾಡಿ. ಜನಸಂಖ್ಯೆ 2ಲಕ್ಷ ಇದ್ದಲ್ಲಿ ಮತ್ತೊಂದು ಕ್ಯಾಂಟೀನ್ ಪ್ರಾರಂಭಿಸುವ ಔದಾರ್ಯ ತೋರಿ ಎಂದು ಸೂಚನೆ ನೀಡಿದರು.
ಬಯಲು ಬಹಿರ್ದಸೆ ಮುಕ್ತ: ರಾಜ್ಯದಲ್ಲಿ 32 ಲಕ್ಷ ಶೌಚಾಲಯ ನಿರ್ಮಾಣ ಆಗಿದೆ. 176 ತಾಲೂಕುಗಳ ಪೈಕಿ ಈವರೆಗೆ 76 ತಾಲೂಕುಗಳು ಮಾತ್ರ ಬಯಲು ಬಹಿರ್ದಸೆ ಮುಕ್ತ ತಾಲೂಕುಗಳಾಗಿವೆ. ಮುಂದಿನ 2018ರ ಮಾರ್ಚ್ ಒಳಗೆ ರಾಜ್ಯ ಬಯಲು ಬಹಿರ್ದಸೆ ಮುಕ್ತ ಆಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ತ್ವರಿತವಾಗಿ ಆಗಬೇಕು ಎಂದರು.
ಸರಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಿ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕವಾದ ಆಹಾರ ಒದಗಿಸುವ ಈ ಯೋಜನೆಯ ಸಮರ್ಪಕ ಅನುಷ್ಠಾನ ಆಗಬೇಕು. ಮಲೆನಾಡು ಜಿಲ್ಲೆಗಳಲ್ಲಿ ಒಂದು ಮನೆ ಒಂದು ಪ್ರದೇಶದಲ್ಲಿದ್ದರೆ ಮತ್ತೊಂದು ಮನೆ ಮತ್ತೊಂದು ಪ್ರದೇಶದಲ್ಲಿದೆ. ಆದ ಕಾರಣ, ಯೋಜನೆಯ ಅನುಷ್ಠಾನದಲ್ಲಿ ಕೆಲವು ಸಮಸ್ಯೆಗಳು ಎದುರಾಗಿದೆ ಎಂಬ ಅಂಶ ಗಮನಕ್ಕೆ ಬಂದಿದೆ. ಆದಕಾರಣ, ಮಲೆನಾಡು ಜಿಲ್ಲೆಗಳಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ವಿಶೇಷ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಅನಿಲ ಭಾಗ್ಯ ಯೋಜನೆಯಡಿ 30ಲಕ್ಷ ಕುಟುಂಬಗಳಿಗೆ ಸೌಲಭ್ಯ ಒದಗಿಸುವ ಗುರಿ ಇದೆ. ಇದನ್ನು ಈ ಕೂಡಲೇ ಕಾರ್ಯಗತಗೊಳಿಸಿ, ರಾಜ್ಯದಲ್ಲಿ ಬಡತನ ರೇಖೆಗಿಂತಲೂ ಕಡಿಮೆ ಇರುವ ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಕಾರ್ಡ್ ವಿತರಿಸಿ. ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಹಾಲು ನೀಡುವಲ್ಲಿ ಸುವಾಸಿತ ಹಾಲು ಒದಗಿಸುವ ಕಾರ್ಯ ಈಗಾಗಲೇ ಜಾರಿಯಾಗಿದೆ ಎಂದು ಹೇಳಿದರು.
ಬೆಳೆ ಸಮೀಕ್ಷೆ: ಬೆಳೆ ಸಮೀಕ್ಷಾ ಕಾರ್ಯವನ್ನು ನ.10ರ ವರೆಗೆ ಅಧಿಕಾರಿಗಳು ಮಾಡಲಿ. ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಅತ್ಯಾವಶ್ಯಕವೆನಿಸಿರುವ ತಮ್ಮ ಭೂಮಿಗೆ ಸಂಬಂಧಿತ ಮಾಹಿತಿಯನ್ನು ಬೆಳೆ ಸಮೀಕ್ಷಾ ಆ್ಯಪ್ ಮೂಲಕ ರೈತರೇ ದಾಖಲಿಸಲು ಪ್ರೇರೇಪಿಸಿ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಎಸ್ಸಿ-ಎಸ್ಟಿ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಿರುವ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆ ಎಲ್ಲವೂ ಕಾಲ ಕಾಲಕ್ಕೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಬೇಕು. ಹಠಾತ್ ಭೇಟಿ ನೀಡಿ ಪರಿಶೀಲಿಸಿ. ಕರ್ತವ್ಯ ಲೋಪ ಎಸಗಿದವರ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಿಸ್ತು ಕ್ರಮ ಜರಗಿಸಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ







