ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ: ಸುನೀಲ್ ಕುಮಾರ್
ಬೆಂಗಳೂರು, ನ.7: ಮಹಿಳೆಯರ ಗಮನ ಬೇರೆಡೆ ಸೆಳೆದು ಆಭರಣ ದೋಚುವ ಸರಗಳ್ಳರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಗಳ್ಳತನ ತಡೆಯಲು ಎಲ್ಲ ಕಡೆ ಗಸ್ತು ಹೆಚ್ಚಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ಅದೇ ರೀತಿ, ಮಾದಕ ವಸ್ತು ಮಾರಾಟ, ಮಹಿಳಾ ಸಂಬಂಧ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಸೂಚಿಸಿರುವುದಾಗಿ ಮಾಹಿತಿ ನೀಡಿದರು.
ನಗರದಲ್ಲಿ ನಾಕಾಬಂದಿ ಮಾಡಿ ಬೈಕ್‌ಗಳ ತಪಾಸಣೆ ನಡೆಸುವಂತೆ ಅವರು ಸೂಚನೆ ನೀಡಿದ್ದು, ಈಗಾಗಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ನಗರದಲ್ಲಿ ಕಳೆದ 10 ದಿನದಲ್ಲಿ ವಿವಿಧ ಠಾಣೆಗಳಲ್ಲಿ 38 ಸರಗಳ್ಳತನ ಪ್ರಕರಣ ದಾಖಲಾಗಿವೆ ಎಂದರು.
ಆರೋಪಿ ವಿರುದ್ಧ ಗೂಂಡಾ ಕಾಯ್ದೆ: 80ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ತಬ್ರೇಝ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ಈತನ ವಿರುದ್ಧ ಗೂಂಡಾ ಕಾಯ್ದೆ ಅಡಿ ಮೊಕದ್ದಮೆ ದಾಖಲು ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.





