ದೇಶಿ ನಿರ್ಮಿತ ಸಬ್‌ಸೋನಿಕ್ ಕ್ಷಿಪಣಿ ‘ನಿರ್ಭಯ್’ ಯಶಸ್ವಿ ಪರೀಕ್ಷಾರ್ಥ ಹಾರಾಟ

ಭುವನೇಶ್ವರ,ನ.7: ಭಾರತವು ತನ್ನ ದೇಶಿ ನಿರ್ಮಿತ ದೂರವ್ಯಾಪ್ತಿಯ ಸಬ್‌ಸೋನಿಕ್ ಕ್ಷಿಪಣಿ ‘ನಿರ್ಭಯ್’ದ ಪರೀಕ್ಷಾರ್ಥ ಹಾರಾಟವನ್ನು ಮಂಗಳವಾರ ಒಡಿಶಾದ ಬಾಲಾಸೋರ್‌ನ ಚಂಡಿಪುರದ ಸಮಗ್ರ ಪರೀಕ್ಷಾ ವಲಯ(ಐಟಿಆರ್)ದಿಂದ ಯಶಸ್ವಿಯಾಗಿ ನಡೆಸಿದೆ.
1,000 ಕಿ.ಮೀ.ದಾಳಿ ವ್ಯಾಪ್ತಿಯನ್ನು ಹೊಂದಿರುವ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಉಡಾವಕದ ಮೂಲಕ ಬೆಳಿಗ್ಗೆ 11:20ಕ್ಕೆ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿದವು.
290 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, ಆರು ಮೀ.ಉದ್ದ ಮತ್ತು 0.52 ಮೀ.ವ್ಯಾಸ ಹೊಂದಿರುವ 1,500 ಕೆಜಿ ತೂಕದ ನಿರ್ಭಯ್ ಕ್ಷಿಪಣಿಯು ಭಾರತ-ರಷ್ಯಾ ಜಂಟಿ ತಯಾರಿಕೆಯ ಬ್ರಹ್ಮೋಸ್ ಕ್ಷಿಪಣಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ.
ನಿರ್ಭಯ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವು ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಮೂಲಗಳು ತಿಳಿಸಿದವು.
24 ವಿಧಗಳ ಯುದ್ಧಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ನಿರ್ಭಯ್ ಏಕಕಾಲದಲ್ಲಿ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ನಿರ್ಭಯ ಕ್ಷಿಪಣಿಯ ಐದನೇ ಪರೀಕ್ಷಾರ್ಥ ಹಾರಾಟವಾಗಿದೆ. ಅದು 2013,ಮಾ.12ರಂದು ಮೊದಲ ಬಾರಿಗೆ ಪರೀಕ್ಷೆಗೊಳಗಾಗಿತ್ತು. ಆದರೆ 20 ನಿಮಿಷಗಳ ಹಾರಾಟದ ಬಳಿಕ ಪತನಗೊಂಡು ಪರೀಕ್ಷೆಯು ವಿಫಲಗೊಂಡಿತ್ತು. ಆದರೆ 2014, ಅ.17ರಂದು ನಡೆದಿದ್ದ ಎರಡನೇ ಪರೀಕ್ಷೆಯು ಯಶಸ್ವಿಯಾಗಿತ್ತು. ನಂತರ 2015,ಅಕ್ಟೋಬರ್ ಮತ್ತು 2016,ಡಿಸೆಂಬರ್‌ನಲ್ಲಿ ನಡೆದಿದ್ದ ಇನ್ನೆರಡು ಪರೀಕ್ಷೆಗಳು ವಿಫಲಗೊಂಡಿದ್ದವು.







