ಕರ್ನಾಟಕದ ಪ್ಲಾಸ್ಟಿಕ್ ನಿಷೇಧ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ

ಹೊಸದಿಲ್ಲಿ,ನ.7: ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಮತ್ತು ಇತರ ಉತ್ಪನ್ನಗಳ ತಯಾರಿಕೆ, ಪೂರೈಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರಕಾರದ 2016,ಮಾ.11ರ ಅಧಿಸೂಚನೆಯ ಅನುಷ್ಠಾನಕ್ಕೆ ತಡೆಯಾಜ್ಞೆಯನ್ನು ಕೋರಿ ಕೆನರಾ ಪ್ಲಾಸ್ಟಿಕ್ ತಯಾರಕರ ಮತ್ತು ವ್ಯಾಪಾರಿಗಳ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.
ಆದರೆ ಅರ್ಜಿಯ ಪರಿಶೀಲನೆಗೆ ಅಂಗೀಕಾರವನ್ನು ಸೂಚಿಸಿದ ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ ಗುಪ್ತಾ ಅವರ ಪೀಠವು ಅದನ್ನು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಸಂಘವು ಸಲ್ಲಿಸಿರುವ ಇನ್ನೊಂದು ಸಿವಿಲ್ ಮೇಲ್ಮನವಿಯೊಂದಿಗೆ ಲಗತ್ತಿಸಲು ನಿರ್ಧರಿಸಿತು.
ಅರ್ಜಿದಾರರ ಮೇಲ್ಮನವಿಯನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರದ ಚೆನ್ನೈ ಪೀಠವು ಈ ಹಿಂದೆ ವಜಾಗೊಳಿಸಿದ್ದು, ಇದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಮೊದಲು ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.
ಪರಿಸರ(ರಕ್ಷಣೆ)ಕಾಯ್ದೆ,1986ರ ಕಲಂ 5ರಡಿ ಹೊರಡಿಸಲಾಗಿರುವ ಅಧಿಸೂಚನೆಯು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವನ್ನು ನೀಡಿಲ್ಲ. ಭಾರತ ಸರಕಾರವು 50 ಮೈಕ್ರೋನ್‌ಗಳಿಂದ ಕಡಿಮೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಪ್ಲಾಸ್ಟಿಕ್ ತ್ಯಾಜ್ಯ(ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು,2011 ಹೆಸರಿನಲ್ಲಿ ಕೇಂದ್ರ ನಿಯಮವನ್ನು ಅಂಗೀಕರಿಸಿರುವಾಗ ನಿಯೋಜಿತ ಅಧಿಕಾರದಡಿ ರಾಜ್ಯ ಸರಕಾರವು ಸಂಪೂರ್ಣ ನಿಷೇಧವನ್ನು ಹೇರುವಂತಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.







