'ಸಿದ್ದರಾಮಯ್ಯ ಹಿಂದೂ ಹೌದೋ, ಅಲ್ಲವೋ ಎಂದು ತಿಳಿಯಲು ಡಿಎನ್‌ಎ ಪರೀಕ್ಷೆ ಮಾಡಿಸಬೇಕು'
ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಬೆಳಗಾವಿ, ನ. 7: ‘ಮೀನು-ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವ ಸಿಎಂ ಸಿದ್ದರಾಮಯ್ಯ ಹಿಂದೂ ಹೌದೋ, ಅಲ್ಲವೋ ಎಂದು ಡಿಎನ್‌ಎ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿದೆ’ ಎಂದು ಬಿಜೆಪಿಯ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ ವಿಎಚ್‌ಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಆದವರು ಎಲ್ಲ ಜಾತಿ-ಧರ್ಮದವರನ್ನು ಪ್ರೀತಿಸಬೇಕು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಧರ್ಮದವರಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಅವರಿಗೆ ಮುಂದೆ ದೌರ್ಭಾಗ್ಯ ಕಾದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರಕಾರದಿಂದ ಆಚರಿಸಲಿ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಲೇವಡಿ ಮಾಡಿದ ಪಾಟೀಲ್, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದವು, ಯಾವ ಮುಖ್ಯಮಂತ್ರಿಯೂ ಟಿಪ್ಪು ಜಯಂತಿ ಆಚರಿಸಿರಲಿಲ್ಲ. ಅದರ ಬಗ್ಗೆ ವಿಚಾರ ಮಾಡಿವೂ ಇಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ. ಇಂಥವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಅವರು ಮೈಸೂರಿನಲ್ಲಿ ಹುಟ್ಟಿದವರೋ ಅಥವಾ ಪಾಕಿಸ್ತಾನದ ಲಾಹೋರ್‌ನಲ್ಲಿ ಹುಟ್ಟಿದವರೋ ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಏಕವಚನದಲ್ಲಿ ಸಿದ್ದರಾಮಯ್ಯನವರನ್ನು ಟೀಕಿಸಿದರು.
ನಾವು ಮುಸ್ಲಿಂ ವಿರೋಧಿಗಳಲ್ಲ. ಟಿಪ್ಪು ಸುಲ್ತಾನ್ ವಿರೋಧಿಗಳು. ನ.10ರಂದು ಬೆಳಗಾವಿಯ ಪ್ರತೀ ಗಲ್ಲಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಟಿಪ್ಪುಸುಲ್ತಾನ್ ಜಯಂತಿ ವಿರೋಧಿಸಬೇಕು ಎಂದರು.
ಇಲ್ಲಿನ ಅನ್ನ ತಿಂದು, ನೀರು ಕುಡಿಯುವ ಕೆಲವರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. ಶಾಸಕ ಸ್ಥಾನ ಹೋದರೆ ಹೋಗಲಿ. ನಾನು ಹಿಂದು ಅನ್ನೋದನ್ನು ಎದೆತಟ್ಟಿಕೊಂಡು ಹೇಳುತ್ತೇನೆ. ಅಬ್ದುಲ್ ಕಲಾಂಗೆ ಬೇಕಿದ್ದರೆ ಸಲಾಂ ಹಾಕುತ್ತೇವೆ. ಆದರೆ, ಟಿಪ್ಪುಸುಲ್ತಾನ್‌ಗೆ ಅಲ್ಲ. ಹಿಂದೂ ಧರ್ಮಕ್ಕಾಗಿ ಖಡ್ಗ ಹಿಡಿಯಲು ಸಿದ್ಧ ಎಂದು ಪ್ರಚೋದನಕಾರಿ ಮಾತುಗಳನ್ನಾಡಿದರು.







