ಹದಗೆಟ್ಟ ಹೆದ್ದಾರಿ: ಸಾರ್ವಜನಿಕ ಹಿತಾಸಕ್ತಿ ವೇದಿಕೆಯಿಂದ ಸಂಸದರಿಗೆ ಮನವಿ
.jpg)
ಬಂಟ್ವಾಳ, ನ. 7: ತಾಲೂಕಿನ ಪಾಣೆಮಂಗಳೂರಿನಿಂದ ಪ್ರಾರಂಭವಾಗಿ ಬೋಳಂಗಡಿಯ ನರಹರಿ ಪರ್ವತದವರೆಗೆ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣ ಹದಗೆಟ್ಟ ಪರಿಣಾಮ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿಬಿಟ್ಟಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಪಾಣೆಮಂಗಳೂರು ಸಾರ್ವಜನಿಕ ಹಿತಾಸಕ್ತಿ ವೇದಿಕೆಯ ವತಿಯಿಂದ ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ರಸ್ತೆಯ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿದ್ದ ಮರಗಳನ್ನು ಕಡಿದು ಹಾಕಲಾಗಿದ್ದರೂ, ಸಂಪೂರ್ಣವಾಗಿ ಇನ್ನೂ ತೆರವು ಮಾಡಿಲ್ಲ. ಅಲ್ಲದೇ, ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಗುಂಡಿಗಳಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ನಡೆದಾಡಲು ಕೂಡ ಅಸಾಧ್ಯವಾಗಿದ್ದು, ಮಳೆಯ ಸಂದರ್ಭದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ನೀರು ರಸ್ತೆಯಲ್ಲೇ ಹರಿದಾಡುತ್ತಿರುವುದರಿಂದ ಜನಸಾಮಾನ್ಯರ ದಿನಿನಿತ್ಯದ ಬದುಕಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು ಮುತುವರ್ಜಿ ವಹಿಸಿ, ಶೀಘ್ರವೇ ಬಗೆಹರಿಸಬೇಕೆಂದು ಆಗ್ರಹಿಸಿರುವ ಸಾರ್ವಜನಿಕ ಹಿತಾಸಕ್ತಿ ವೇದಿಕೆಯ ಮನವಿಗೆ ಸ್ಪಂದಿಸಿರುವ ಸಂಸದ ನಳಿನ್ ಕುಮಾರ್ ಕಟೀಲ್, ವಾರದೊಳಗೆ ಸಮಸ್ಯೆಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳ ಪರವಾಗಿ, ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಎಲ್ ಆ್ಯಂಡ್ ಟಿಯ ಅಧಿಕಾರಿ ಶ್ರೀಕಟ್ಟಿಯವರಿಗೂ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಸಾರ್ವಜನಿಕ ಹಿತಾಸಕ್ತಿ ವೇದಿಕೆ ಪಾಣೆಮಂಗಳೂರು ಅಧ್ಯಕ್ಷ ರಘು ಸಪಲ್ಯ, ಕಾರ್ಯದರ್ಶಿ ಎಂ.ಎಚ್. ಮುಸ್ತಫಾ ಬೋಳಂಗಡಿ, ಜೊತೆ ಕಾರ್ಯದರ್ಶಿ ಸತೀಶ್ ಪಿ.ಎಸ್, ಮಹಿಳಾ ಕಾರ್ಯದರ್ಶಿ ವಸಂತಿ ಗಂಗಾಧರ್, ವೇದಿಕೆಯ ಸದಸ್ಯರಾದ ಇದಿನಬ್ಬ ನಂದಾವರ, ದಿನೇಶ್ ಮೆಲ್ಕಾರ್, ಖಾಸಿಂ ಚೆಂಡಾಡಿ, ಮುಹ್ಸಿನ್ ಚೆಂಡಾಡಿ ಉಪಸ್ಥಿತರಿದ್ದರು.







