ಧರ್ಮಸ್ಥಳ: ನ. 21 ಅಂತಾರಾಷ್ಟ್ರೀಯ ಯೋಗೋತ್ಸವ
ಬೆಳ್ತಂಗಡಿ, ನ. 7: ಭಾರತೀಯ ಯೋಗ ಫೆಡರೇಶನ್ ಮತ್ತು ಕರ್ನಾಟಕ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ವತಿಯಿಂದ ನ. 21 ರಿಂದ 24 ರವರೆಗೆ ಅಂತಾರಾಷ್ಟ್ರೀಯ ಯೋಗೋತ್ಸವ ಹಾಗು 2 ನೇ ಫೆಡರೇಷನ್ ಯೋಗ ಸ್ಪೋರ್ಟ್ಸ್ ಕಪ್ 2017 ಧರ್ಮಸ್ಥಳದಲ್ಲಿ ಆಯೋಜಿಸಲಾಗಿದೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ನಿರ್ದೇಶಕ ಡಾ ಶಶಿಕಾಂತ ಜೈನ್ ತಿಳಿಸಿದರು.
ಉಜಿರೆಯಲ್ಲಿನ ಶ್ರೀ ಧ.ಮಂ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿ ಕರೆದು ಕಾರ್ಯಕ್ರಮಗಳ ವಿವರ ನೀಡಿದರು.
ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯುವ ಕಳೆದ 25 ವರ್ಷದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡುತ್ತಾ ಬಂದಿದೆ. ಯೋಗ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆಯನ್ನೂ ಮಾಡಿದೆ. ಯುವ ಜನಾಂಗವು ಯೋಗಾಭ್ಯಾಸವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಿ ಸಧೃಡ ಹಾಗು ಸ್ವಸ್ಥ ಭಾರತವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಯೋಗೋತ್ಸವ ಹಾಗೂ ಯೋಗಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಯೋಗೋತ್ಸವದಲ್ಲಿ ಸಿಂಗಾಪೂರ್,ಮಲೇಷಿಯಾ, ಥೈಲ್ಯಾಂಡ್, ವಿಯೇಟ್ನಾಂ, ಚೀನಾ ಇರಾಕ್, ಇರಾನ್ ಹಾಗು ದುಬೈ ದೇಶಗಳಿಂದ 100, ಭಾರತದಿಂದ 400 ಮಂದಿ ಹೀಗೆ 500 ಮಂದಿ ಯೋಗಪಟುಗಳು ಭಾಗವಹಿಸಲಿದ್ದಾರೆ. ಆರು ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ವಯೋಮಾನದವರಿಗೆ ಯೋಗ ಪ್ರಾತ್ಯಕ್ಷಿಕೆಗಳು, ಯೋಗ ನೃತ್ಯ ಪ್ರಾತ್ಯಕ್ಷಿಕೆಗಳ ಸ್ಪರ್ಧೆ, ಅಂತಾರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆ ಹಾಗೂ ಪರಿಣತರಿಂದ ವಿಚಾರಗೋಷ್ಠಿಗಳು ಹಾಗು ಸತ್ಸಂಗ ನಡೆಯಲಿದೆ ಎಂದರು.
ಪೂರಕ ಮಾಹಿತಿ ನೀಡಿದ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ ಪ್ರಶಾಂತ ಶೆಟ್ಟಿ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಯೋಗದ ಕನಸನ್ನು ನನಸನ್ನು ಮಾಡುವ ಸಂಕಲ್ಪವೂ ನಮ್ಮದಾಗಿದೆ. ವಿಯೆನ್ನಾ, ಆಸ್ಟ್ರೀಯಾ, ಯುರೋಪ್‌ಗಳಲ್ಲಿ ಶ್ರೀ ದೀಪಾ ಮಾಧವಾನಮದ ಆಶ್ರಮ ನಡೆಸುತ್ತಿರುವ ವಿಶ್ವಗುರು ಮಹೇಶ್ವರಾನಂದ್ ಪರಮಹಂಸ ಸ್ವಾಮೀಜಿ ಕಾರ್ಯಕ್ರಮವನ್ನು ನ. 21 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಇವರು ಮೊದಲ ಯೋಗ ದಿನವನ್ನು ದೆಹಲಿಯಲ್ಲಿ ಉದ್ಘಾಟಿಸಿದ್ದರು. ಅಧ್ಯಕ್ಷತೆಯನ್ನು ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೇಂದ್ರ ಸರಕಾರದ ಆಯುಷ್ ಮಂತ್ರಾಲಯದ ಶ್ರೀಪಾದ ಎಸ್ಸೋ ನಾಯಕ್ ಉಪಸ್ಥಿತರಿರಲಿದ್ದಾರೆ. ನ. 24 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರಕಾರದ ಯುವಜನ ಸೇವಾ ಇಲಾಖಾ ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯೋಗೋತ್ಸವಕ್ಕೆ ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದ್ದು ಶಾಂತಿವನ ಟ್ರಸ್ಟ್‌ನ ಟ್ರಸ್ಟಿಯಾದ ಡಿ. ಹಷೇಂದ್ರ ಕುಮಾರ್ ಅವರು ಸಮಿತಿ ಕಾರ್ಯಾಧ್ಯಕ್ಷರಾಗಿರುತ್ತಾರೆ. ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸ್ಪರ್ಧೆಗಳು ನಡೆಯುವ ಸಂದರ್ಭದಲ್ಲಿ ಮೂರು ದಿನ ಸಂಜೆ ಮನೋರಂಜನೆ ಕಾರ್ಯಕ್ರಮಗಳನ್ನು ವಿಶೇಷ ಕಲಾ ತಂಡಗಳಿಂದ ಏರ್ಪಡಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಅಸೋಸಿಷಿಯೇಶನ್ ಅಧ್ಯಕ್ಷ ಗಂಗಾಧರಪ್ಪ, ಉಪಾಧ್ಯಕ್ಷ ಕೃಷ್ಣಮೂರ್ತಿ, ದಕ್ಷಿಣ ವಲಯ ಕಾರ್ಯದರ್ಶಿ ಕೆ. ಪ್ರಭು, ಯೋಗ ವಿಭಾಗದ ಡೀನ್ ಡಾ ಶಿವಪ್ರಸಾದ ಶೆಟ್ಟಿ, ವಿಭಾಗ ಮುಖ್ಯಸ್ಥೆ ಡಾ ಸುಜಾತಾ ಇದ್ದರು.







