ಮಂಡ್ಯ: ಆಪೆ ಆಟೊ ಉರುಳಿ 8 ಮಂದಿ ಗಾಯ

ಮಂಡ್ಯ, ನ.7: ವಾರದ ಹಿಂದೆಯಷ್ಟೇ ಮದ್ದೂರಿನ ಬಳಿ ಮದುವೆ ದಿಬ್ಬಣದ ಕ್ಯಾಂಟರ್ ಮರಕ್ಕೆ ಢಿಕ್ಕಿಯಾಗಿ 14 ಮಂದಿ ಬಲಿ ತೆಗೆದುಕೊಂಡ ಘಟನೆ ಮಾಸುವ ಮುನ್ನವೇ ಮಳವಳ್ಳಿ ತಾಲೂಕಿನಲ್ಲಿ ಆಪೆ ಆಟೊ ರಿಕ್ಷಾ ಉರುಳಿ 8 ಮಂದಿ ಗಾಯಗೊಂಡಿದ್ದಾರೆ.
ಮದ್ದೂರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಟೆಂಪೋ, ಕ್ಯಾಂಟರ್, ಆಟೊಗಳಲ್ಲಿ ಮದುವೆ, ದೇವಸ್ಥಾನ, ಇತರ ಕಡೆಗೆ ಸಾಮೂಹಿಕವಾಗಿ ತೆರಳುವುದನ್ನು ನಿರ್ಬಂಧಿಸಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದರೂ, ಯಥಾಸ್ಥಿತಿ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳವಳ್ಳಿ ತಾಲೂಕಿನ ಬಸವನಬೆಟ್ಟದ ಮೂರನೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಪೆ ಆಟೊರಿಕ್ಷಾ ಉರುಳಿಬಿದ್ದು 8 ಜನರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೊಲ್ಲರಹಳ್ಳಿ ಮತ್ತು ಮಲ್ಲೇಗೌಡನದೊಡ್ಡಿ ಗ್ರಾಮದ ತಮ್ಮೇಗೌಡ, ಜಯಮ್ಮ, ಎಲ್ಲಮ್ಮ, ಸುಮಿತ್ರ, ತಿಮ್ಮಮ್ಮ ಹಾಗೂ 4 ವರ್ಷದ ಗಂಡು ಮಗು ಲಕ್ಷ್ಮೀಸಾಗರ ಐಶ್ವರ್ಯ ಅಪಘಾತದಲ್ಲಿ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಬಸವನಬೆಟ್ಟದ ಮೇಲಿರುವ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆಯನ್ನು ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳಿಗೆ ಹಲಗೂರಿನ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಳವಳ್ಳಿ ಮತ್ತು ಮಂಡ್ಯ ಜಿಲ್ಲಾಸ್ಪತ್ರೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಳುಗಳನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯಾಧಿಕಾರಿ ಮತ್ತು ಆ್ಯಂಬ್ಯುಲೆನ್ಸ್ ಇಲ್ಲದ ಕಾರಣ ಆಕ್ರೋಶ ವ್ಯಕ್ತವಾಯಿತು. ನಂತರ, ಖಾಸಗಿ ವಾಹನಗಳಲ್ಲಿ ಗಾಯಳುಗಳನ್ನು ಮಂಡ್ಯ ಮತ್ತು ಮಳವಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.







