ಎಚ್‌ಡಿಕೆಗೆ ವಿಧಿಸಿದ್ದ ಜಾಮೀನು ಷರತ್ತು ಸಡಿಲಿಸಲು ನಿರಾಕರಿಸಿದ ಹೈಕೋರ್ಟ್
ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣ
ಬೆಂಗಳೂರು, ನ.7: ಜಂತಕಲ್ ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದ ವಿಚಾರಣೆಗಾಗಿ 15 ದಿನಗಳಿಗೊಮ್ಮೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿಧಿಸಿದ್ದ ನಿರೀಕ್ಷಣಾ ಜಾಮೀನು ಷರತ್ತು ಸಡಿಲಗೊಳಿಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ತನಿಖಾಧಿಕಾರಿಗಳ ಮುಂದೆ ಹಾಜರಾತಿಯಿಂದ ವಿನಾಯಿತಿ ಕೋರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಪೀಠ, ಅರ್ಜಿದಾರರು ಈಗಾಗಲೇ 3 ತಿಂಗಳು ನಿರೀಕ್ಷಣಾ ಜಾಮೀನು ಷರತ್ತುಗಳನ್ನು ಪೂರೈಸಿದ್ದು, ಉಳಿದ 3 ತಿಂಗಳು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿ ಎಂದು ತಿಳಿಸಿ, ನಿರೀಕ್ಷಣಾ ಜಾಮೀನು ಷರತ್ತು ಸಡಿಲಗೊಳಿಸಲು ನಿರಾಕರಿಸಿತು.
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ತಮಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರತಿ 15 ದಿನಗಳಿಗೊಮ್ಮೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ವಿಧಿಸಿರುವ ಷರತ್ತು ಸಡಿಲಗೊಳಿಸುವಂತೆ ಕೋರಿ ಎಚ್.ಡಿ.ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ ಅ.25ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ಪೀಠ, ಈ ಮೊದಲು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಮೂರ್ತಿ ರತ್ನಕಲಾ ಅವರ ಮುಂದೆಯೇ ಈ ಕುರಿತು ಮನವಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತ್ತು.
ಸದ್ಯ ನ್ಯಾಯಮೂರ್ತಿ ರತ್ನಕಲಾ ಕಲಬುರಗಿ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರಣ, ವೀಡಿಯೊ ಕಾನ್ಫರೆನ್ಸ್ ಮೂಲಕ ಮನವಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಪರವಾನಗಿ ನೀಡುವಂತೆ ಐಎಎಸ್ ಅಧಿಕಾರಿಯ ಮೇಲೆ ಒತ್ತಡ ಹೇರಿದ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಪೀಠ, ಪ್ರಕರಣದ ಸಂಬಂಧ ತನಿಖಾಧಿಕಾರಿಗಳು ಅಂತಿಮ ವರದಿ ಸಲ್ಲಿಸುವವರೆಗೆ ಅಥವಾ 6 ತಿಂಗಳವರೆಗೆ, ಇವೆರಡರಲ್ಲಿ ಯಾವುದು ಮೊದಲು ಘಟಿಸುವುದೋ ಅಲ್ಲಿಯವರೆಗೆ 15 ದಿನಗಳಿಗೊಮ್ಮೆ ತನಿಖಾಧಿಕಾರಿಗಳ ಮುಂದೆ ತಪ್ಪದೇ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿತ್ತು.







