ಮನೆ ಮೇಲೆ ಬಿದ್ದ ತೆಂಗು: ಇಬ್ಬರಿಗೆ ಗಾಯ; ಅಪಾರ ಹಾನಿ
.jpg)
ಬಂಟ್ವಾಳ, ನ.7: ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮನೆಯೊಳಗಿದ್ದ ಇಬ್ಬರು ಗಾಯಗೊಂಡು, ಅಪಾರ ನಷ್ಟ ಉಂಟಾದ ಘಟನೆ ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗಾಯಾಳುಗಳನ್ನು ಇಲ್ಲಿನ ನಿವಾಸಿ ಲೀಲಾ ಪೂಜಾರಿ ಮತ್ತು ಇವರ ಅಣ್ಣನ ಮಗ ನಿಶಾಂತ್ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಭಾರೀ ಗಾಳಿ ಮಳೆಯಾಗುತ್ತಿದ್ದಂತೆಯೇ ಮನೆ ಅಂಗಳದಲ್ಲಿದ್ದ ತೆಂಗಿನ ಮರವೊಂದು ದಿಢೀರನೆ ಮುರಿದು ಮನೆ ಮೇಲೆ ಬಿದ್ದಿದೆ. ಇದರಿಂದಾಗಿ ಮನೆಯೊಳಗೆ ಕುಳಿತಿದ್ದ ನಾರಾಯಣ ಪೂಜಾರಿ ಅವರ ಸಹೋದರಿ ಲೀಲಾ ಮತ್ತು ನಿಶಾಂತ್ ಅವರ ತಲೆಗೆ ಹಂಚಿನ ತುಂಡು ರಬಸದಿಂದ ತಗುಲಿ ಗಾಯವಾಗಿದೆ. ಇದೇ ವೇಳೆ ಉಂಟಾದ ಭಾರೀ ಸದ್ದಿಗೆ ಧಾವಿಸಿ ಬಂದ ಸ್ಥಳೀಯರು ರಾತ್ರಿಯೇ ಅವರನ್ನು ಸಿದ್ಧಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವುದಾಗಿ ತಿಳಿಸಿದ್ದಾರೆ.
ಅಪಾರ ನಷ್ಟ:
ಈ ನಡುವೆ ತೆಂಗಿನ ಮರ ಬಿದ್ದ ಪರಿಣಾಮ ಮನೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ರೀಪು ಮತ್ತಿತರ ಸಾಮಾಗ್ರಿ ಮುರಿದು ಬಹುತೇಕ ಹೆಂಚು ಪುಡಿಯಾಗಿದೆ. ಇನ್ನೊಂದೆಡೆ ಮನೆಯಲ್ಲಿದ್ದ ಟಿವಿ, ಫ್ಯಾನ್ ಸಹಿತ ವಿದ್ಯುತ್ ತಂತಿ ಸಂಪೂರ್ಣ ಹಾನಿಗೀಡಾಗಿದೆ. ಇದರಿಂದಾಗಿ ಒಟ್ಟು ರೂ 1.5ಲಕ್ಷ ಮೊತ್ತದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ರಾಯಿ ಗ್ರಾಪಂ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಸದಸ್ಯೆ ನಿರುಪಮಾ ಎಸ್.ಭಂಡಾರಿ, ಶೋಭಾ ಚಿಂಗಲಚ್ಚಿಲ್, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ, ಗ್ರಾಮಕರಣಿಕ ವಿನೋದ್ ಕುಮಾರ್, ಸಹಾಯಕ ರಮೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಮನೆಯವರು ತಿಳಿಸಿದ್ದಾರೆ.







