ಭಾರತದಲ್ಲಿ ಬ್ಯಾನ್ ಆದ ನೋಟು ಆಫ್ರಿಕಾದ ಚುನಾವಣಾ ಪ್ರಚಾರದಲ್ಲಿ... !

ಕೊಚ್ಚಿ, ನ. 7: ಕಳೆದ ವರ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ 1000 ಹಾಗೂ 500ರ ನೋಟ ನಿಷೇಧಿಸಿತ್ತು. ಆದರೆ ಈ ಎಲ್ಲ ನೋಟುಗಳು ಈಗ ದಕ್ಷಿಣ ಆಫ್ರಿಕಾದಲ್ಲಿ ಚುನಾವಣೆ ಪ್ರಚಾರದಲ್ಲಿ ಬಳಕೆಯಾಗಲಿವೆ !.
ಅಚ್ಚರಿಯಾಯಿತೇ ? ಇದು ಸತ್ಯ. ಕೇರಳದ ಕಣ್ಣೂರಿನಲ್ಲಿರುವ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಹಾಗೂ ರಿಸರ್ವ್ ಬ್ಯಾಂಕ್ ಈ ಬಗ್ಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಅಮಾನ್ಯೀಕರಣಗೊಂಡ ನೋಟುಗಳನ್ನು ಕಣ್ಣೂರಿನಲ್ಲಿರುವ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಗೆ ಸಾಗಿಸಲಾಗುತ್ತಿದೆ. ಇಲ್ಲಿ ಅದನ್ನು ಪಲ್ಪ್ ಆಗಿ ಪರಿವರ್ತಿಸಿ ಮರದ ಪಲ್ಪ್‌ನೊಂದಿಗೆ ಸೇರಿಸಿ ಹಾರ್ಡ್ ಬೋರ್ಡ್‌ಗಳನ್ನು ತಯಾರಿಸಲಾಗುತ್ತಿದೆ.
ಈ ಹಾರ್ಡ್‌ಬೋರ್ಡ್‌ಗಳನ್ನು ದಕ್ಷಿಣ ಆಫ್ರಿಕಾದಲ್ಲಿ 2019ರಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದ ವೇಳೆ ಪ್ರದರ್ಶನಾ ಫಲಕ ಹಾಗೂ ಹೋರ್ಡಿಂಗ್‌ಗಳನ್ನು ತಯಾರಿಕೆಗೆ ಬಳಸಲು ನಿರ್ಧರಿಸಲಾಗಿದೆ.
ನಗದು ನಿಷೇಧವಾದ ಕೂಡಲೇ ತಿರುವನಂತಪುರದಲ್ಲಿರುವ ರಿಸರ್ವ್ ಬ್ಯಾಂಕ್ ನಮ್ಮನ್ನು ಸಂಪರ್ಕಿಸಿತು. ಈ ನೋಟುಗಳನ್ನು ಹೇಗೆ ವಿಲೇವಾರಿ ಮಾಡುವುದು ಎಂದು ಅವರಿಗೆ ತಿಳಿದಿರಲಿಲ್ಲ. ಈ ನೋಟುಗಳನ್ನು ವಿಶೇಷ ಕರೆನ್ಸಿ ಕಾಗದದಿಂದ ತಯಾರಿಸಿರುವುದರಿಂದ ದಹಿಸಿದರೆ ಪರಿಸರ ಮಾಲಿನ್ಯ ಆಗುವ ಸಾಧ್ಯತೆ ಇತ್ತು. ಅದನ್ನು ನಮಗೆ ಕಳುಹಿಸಲು ವಿನಂತಿಸಿದೆವು. ಅನಂತರ ಈ ನೋಟುಗಳನ್ನು ಹೇಗೆ ಬಳಸಬಹುದು ಎಂದು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಶೋಧಿಸಿತು.
ಟಿ.ಎಂ. ಭಾವಾ, ಜನರಲ್ ಮ್ಯಾನೇಜರ್ ವೆಸ್ಟರ್ನ್ ಇಂಡಿಯಾ ಪ್ಲೈವುಡ್







