ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೂರವಾಣಿ ಕದ್ದಾಲಿಕೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ನ.7: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಯಾವ ಕಾರಣಕ್ಕಾಗಿ ಈ ರೀತಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬುದರ ಕುರಿತು ನಾನು ಮಾತನಾಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಕರೆಗಳ ಕದ್ದಾಲಿಕೆ ನಡೆಯುತ್ತಿರುವುದಂತು ಸತ್ಯ. ಇದು ಹೊಸದೇನಲ್ಲ. ಸಚಿವ ಎಂ.ಬಿ.ಪಾಟೀಲ್‌ಗೆ ಈ ಬಗ್ಗೆ ಅನುಮಾನ ಬಂದಿರಬಹುದು. ಅದಕ್ಕಾಗಿಯೇ, ಅವರು ಆ ಹೇಳಿಕೆಯನ್ನು ನೀಡಿದ್ದಾರೆ ಎಂದರು.
ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ದಾಳಿ ಮತ್ತು ನಂತರದ ದಿನಗಳಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಕ್ರಿಯೆಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜಕೀಯಕ್ಕೆ ಬಂದ ನಂತರ ಇವೆಲ್ಲ ಸಹಜ. ಎಲ್ಲ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ ಎಂದರು.
ಆದಾಯ ತೆರಿಗೆ ಇಲಾಖೆಯವರು ಇವತ್ತು ವಿಚಾರಣೆಗೆ ಬರುವುದು ಬೇಡ ಎಂದು ಹೇಳಿದ್ದಾರೆ. ಆರೋಪಗಳನ್ನು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತೇನೆ ಎದೆಗುಂದುವುದಿಲ್ಲ. ಐಟಿಯವರು ವಿಚಾರಣೆಗೆ ಕರೆದಾಗಲೆಲ್ಲ ಹೋಗುತ್ತೇನೆ ಎಂದು ತಿಳಿಸಿದರು.
ಲೆಕ್ಕಪರಿಶೋಧಕರಿಲ್ಲದೆ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದರಿಂದ, ನಮ್ಮ ಕುಟುಂಬದ ಸದಸ್ಯರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕು ಎಂದು ಲೆಕ್ಕಪರಿಶೋಧಕರು ಪಾಠ ಮಾಡಿದ್ದಾರೆ ಎಂದು ಒಂದು ಖಾಸಗಿ ಸುದ್ದಿವಾಹಿನಿ ಆಧಾರರಹಿತ ವರದಿಯನ್ನು ಪ್ರಸಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆ ವಾಹಿನಿಯವರು ಇಲ್ಲಿ ಬಂದಿದ್ದಾರಾ ಎಂದು ಪ್ರಶ್ನಿಸಿದ ಶಿವಕುಮಾರ್, ವಾಸ್ತವ ಪರಿಸ್ಥಿತಿಯನ್ನು ಜನತೆಗೆ ತಿಳಿಸುವ ಕೆಲಸ ಮಾಡಿ. ಅದನ್ನು ಬಿಟ್ಟು ಅನಗತ್ಯವಾದ ವಿಷಯಗಳನ್ನು ಪ್ರಸ್ತಾಪಿಸಬೇಡಿ. ನಾನು ಸುಮ್ಮನಿದ್ದೇನೆ. ಅನಗತ್ಯವಾಗಿ ನನ್ನನ್ನು ಕೆಣಕಬೇಡಿ. ನಾನು ಕನಕಪುರದ ಬಂಡೆಯಿದ್ದಂತೆ, ತಾಗಿದರೆ ತಲೆ ಒಡೆದು ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಅಪಪ್ರಚಾರಗಳು ನಡೆದರೆ ನಾನು ಸುಮ್ಮನಿರುವುದಿಲ್ಲ. ಸತ್ಯವೇನಿದೆ ಅದನ್ನು ಹೇಳಿ. ಅದನ್ನು ಬಿಟ್ಟು ಅಪಪ್ರಚಾರ ಮಾಡುತ್ತಿದ್ದರೆ ನಾನು ಸಹಿಸಿಕೊಳ್ಳುವುದಿಲ್ಲ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂಬುದನ್ನು ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ವಾಹಿನಿಗಳ ಪ್ರಮುಖರು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಧಾನಿ ಕ್ಷಮೆ ಕೋರಲಿ: ನೋಟುಗಳನ್ನು ರದ್ದು ಮಾಡಿ ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯನ್ನುಂಟು ಮಾಡಿದ ಪ್ರಧಾನಿ ನರೇಂದ್ರಮೋದಿ, ದೇಶದ ಜನತೆಯ ಕ್ಷಮಾಪಣೆ ಕೋರಬೇಕು. ಅವರ ಈ ನಿರ್ಧಾರದಿಂದ ಜನತೆಗೆ ಯಾವುದೇ ಉಪಯೋಗವಾಗಿಲ್ಲ. ಬದಲಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಯಿತು ಎಂದು ಶಿವಕುಮಾರ್ ತಿಳಿಸಿದರು.
ಜನಸಾಮಾನ್ಯರು ನೋಟುಗಳ ರದ್ದತಿಯಿಂದ ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸಿದರು. ನೋಟುಗಳ ರದ್ದತಿಯಾಗಿ ನಾಳೆಗೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.







