ಬೀದರ್‌ನಲ್ಲಿ ಚಲನಚಿತ್ರ ಸ್ಟೂಡಿಯೊ ಸ್ಥಾಪಿಸಲು ಯೋಜನೆ: ಮೀನಾಕ್ಷಿ ಸಂಗ್ರಾಮ
ಬೀದರ, ನ.7: ಬೆಂಗಳೂರಿನ ಕಂಠೀರವ ಸ್ಟೂಡಿಯೊ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಕಾರ್ಯಕ್ರಮ ಕಂಠೀರವ ಕಲಾ ಉತ್ಸವವನ್ನು ಬೀದರ್‌ನಗರದಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಕಂಠೀರವ ಸ್ಟೂಡಿಯೊ ನಿಯಮಿತದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ತಿಳಿಸಿದ್ದಾರೆ.
ಮಂಗಳವಾರ ನಗರದ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ಇತರೆ ಕಲಾವಿದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಎಂದರು.
ಬೀದರ್ ಜಿಲ್ಲೆ ಐತಿಹಾಸಿಕವಾಗಿ ಮಹತ್ವ ಹೊಂದಿದ್ದು, ಚಿತ್ರೀಕರಣಕ್ಕೆ ಬೇಕಾಗುವ ಆಕರ್ಷಕ ತಾಣಗಳಿವೆ. ಅಲ್ಲದೆ, ಜಾನಪದ ಕಲೆಯೂ ಇಂದಿಗೂ ಜೀವಂತವಿದೆ. ಈ ಅಂಶಗಳನ್ನು ಚಿತ್ರರಂಗದವರಿಗೆ ಪರಿಚಯಿಸುವ ಉದ್ದೇಶವಿದೆ ಎಂದು ಅವರು, ಚಿತ್ರರಂಗದಿಂದ ದೂರವಿರುವ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರರಂಗದ ಚಟುವಟಿಕೆಗಳು ನಡೆಯುವಂತೆ ಪ್ರೋತ್ಸಾಹಿಸಿ, ಇಲ್ಲಿರುವ ಕಲಾವಿದರೂ ಗುರುತಿಸಿಕೊಳ್ಳುವಂತೆ ಅನುಕೂಲವಾಗುವ ದಿಸೆಯಲ್ಲಿ ನಿಯಮಿತದಿಂದಲೇ ಕಂಠೀರವ ಸ್ಟೂಡಿಯೊ ಮಾದರಿಯಲ್ಲಿ ಚಲನಚಿತ್ರ ಸ್ಟೂಡಿಯೊ ನಿರ್ಮಿಸುವ ಬಗ್ಗೆ ಯೋಜಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಚಲನಚಿತ್ರಗಳು ನಿರ್ಮಾಣವಾಗಲು ಅನುಕೂಲವಾಗಲಿದೆ ಎಂದರು.
ಚಲನಚಿತ್ರ ನಿರ್ದೇಶನ, ನಟನೆ, ನೃತ್ಯ ತರಬೇತಿ ನೀಡಲು ಬೀದರ್ ನಗರದಲ್ಲಿ ತರಬೇತಿ ಕೇಂದ್ರವೊಂದನ್ನು ಸ್ಥಾಪಿಸುವ ಬಗ್ಗೆ ಯೋಜಿಸಲಾಗಿದೆ. ಈ ಯೋಜನೆಗಳ ಕುರಿತು ಚರ್ಚಿಸಲು ನ.14 ರಂದು ನಿಯಮಿತದ ಸಾಮಾನ್ಯ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆದು ಅನುಷ್ಠಾನ್ಕಕಾಗಿ ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತದೆ. ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಸುಮಾರು 10 ಎಕರೆ ನಿವೇಶನ ಒದಗಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಚಲನಚಿತ್ರ ಹಾಗೂ ಧಾರಾವಾಹಿಗಳ ನಿರ್ಮಾಣ ಕಾರ್ಯಗಳು ಒಂದೇ ಸೂರಿನಡಿ ನಡೆಯಲು ಕಂಠೀರವ ಸ್ಟೂಡಿಯೋದಲ್ಲಿ ಉತ್ತಮ ವೇದಿಕೆ ಕಲ್ಪಿಸಲಾಗಿದೆ. ಹಿರಿತೆರೆ-ಕಿರುತೆರೆಯನ್ನು ಪ್ರೋತ್ಸಾಹಿಸುವುದರ ಜತೆಗೆ ಕನ್ನಡಿಗರ ಜೀವನಾಡಿಯಂತೆ ಕಂಠೀರವ ಸ್ಟೂಡಿಯೊ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಅವರು, ದಿವಂಗತ ಗುಬ್ಬಿ ವೀರಣ್ಣ, ತಿಪಟೂರು ಎಸ್.ಕರಿಬಸಯ್ಯ, ಕೆ.ವಿ.ಶಂಕರೇಗೌಡ, ಅಂದಾನಪ್ಪ ದೊಡ್ಡಮೇಟಿ, ರತ್ನವರ್ಮ ಹೆಗಡೆ, ಎಸ್.ನಿಜಲಿಂಗಪ್ಪ, ಡಿ.ಕೆಂಪರಾಜ್ ಅವರ ಪ್ರೋತ್ಸಾಹದಿಂದ 1966ರ ಮಾ.18ರಂದು ಸ್ಥಾಪನೆಯಾಗಿರುವ ಕಂಠೀರವ ಸ್ಟುಡಿಯೊ ನಾಡಿನ ಪ್ರತಿಷ್ಠಿತ ಸ್ಟುಡಿಯೊ ಎನಿಸಿಕೊಂಡಿದ್ದು, ಕನ್ನಡ ಚಿತ್ರೋದ್ಯಮ ಅದರಲ್ಲಿಯೂ ಕನ್ನಡ ಭಾಷಾ ಚಿತ್ರಗಳ ನಿರ್ಮಾಣದಲ್ಲಿ ಪ್ರಮುಖ ಸೇವೆ ಸಲ್ಲಿಸುತ್ತಿದೆ ಎಂದು ಮೀನಾಕ್ಷಿ ಸಂಗ್ರಾಮ ಹೇಳಿದರು.







