ಅಕ್ರಮ ಭೂ ಮಂಜೂರು ಮಾಡಿರುವವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು, ನ.7: ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬಗರ್‌ಹುಕುಂ ಯೋಜನೆಯಡಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪಕ್ಷದ ಮುಖಂಡರಾದ ಶ್ರೀಪತಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತ, ಕೂಲಿ ಕಾರ್ಮಿಕರಿಗೆ ಭೂಮಿ ನೀಡಲು ಮೀನಮೇಷ ಎಣಿಸುತ್ತಾರೆ. ಆದರೆ, ರಾಜಕಾರಣಿಗಳಿಗೆ, ವ್ಯಾಪಾರಸ್ಥರಿಗೆ, ಆರ್ಥಿಕವಾಗಿ ಪ್ರಬಲವಾಗಿರುವವರಿಗೆ ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2000-2006 ರವರೆಗೆ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದ ಆರ್.ಅಶೋಕ್ ಅವಧಿಯಲ್ಲಿ 2402 ಎಕರೆ ಜಮೀನನ್ನು 215 ಅನರ್ಹರಿಗೆ ಸಕ್ರಮ ಮಾಡಿಕೊಟ್ಟಿದ್ದಾರೆ. ಈ ವಿಷಯ ವಿಧಾನ ಮಂಡಲದ ಭರವಸೆಗಳ ಸಮಿತಿಗೆ ಕಂದಾಯ ಇಲಾಖೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಹಲವಾರು ದಿನಪತ್ರಿಕೆಗಳು ಈ ಕುರಿತು ವರದಿ ಮಾಡಿದೆ. ಆದುದರಿಂದ ಅಶೋಕ್ ವೆುೀಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಈ ಸಕ್ರಮವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಬಗರ್‌ಹುಕುಂ ಭೂಮಿಯನ್ನು ಸಕ್ರಮ ಮಾಡಿಕೊಳ್ಳಬೇಕಾದರೆ ಫಲಾನುಭವಿ ಸ್ಥಳೀಯರಾಗಿರಬೇಕು. ಹತ್ತಾರು ವರ್ಷಗಳಿಂದ ಸಾಗುವಳಿ ಮಾಡಿರಬೇಕು ಸೇರಿದಂತೆ ವಿವಿಧ ಅರ್ಹತೆಗಳು ಪಡೆದಿರಬೇಕು. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಶಾಸಕರಿಗೆ, ಅವರ ಕುಟುಂಬದವರಿಗೆ, ಪಾಲಿಕೆ ಸದಸ್ಯರಿಗೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರುಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಅವರು ದೂರಿದರು.
ಹೀಗಾಗಿ, ಕೂಡಲೇ ಸರಕಾರ ಅಕ್ರಮವಾಗಿ ಸಕ್ರಮ ಮಾಡಿರುವ ಭೂಮಿಯನ್ನು ಹಿಂಪಡೆಯಬೇಕು. ಅಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವೆುೀಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅರ್ಜಿ ಸಲ್ಲಿಸಿರುವ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.







