ಟಿಪ್ಪು ಜಂಯತಿ ಆಮಂತ್ರಣ ಪತ್ರಿಕೆಯಿಂದ ಸಂಸದೆ, ಶಾಸಕರುಗಳ ಹೆಸರು ಕೈಬಿಟ್ಟ ಜಿಲ್ಲಾಡಳಿತ

ಉಡುಪಿ, ನ.7: ಈ ಬಾರಿಯ ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಿಂದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮೂವರು ಬಿಜೆಪಿ ಶಾಸಕರುಗಳ ಹೆಸರನ್ನು ಉಡುಪಿ ಜಿಲ್ಲಾಡಳಿತ ಕೈಬಿಟ್ಟಿದೆ.
ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆ ಯಲ್ಲಿ ಮುಖ್ಯ ಅತಿಥಿಗಳಾಗಿ ತಮ್ಮ ಹೆಸರನ್ನು ಸೇರಿದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮುದ್ರಿಸಿದ ಆಮಂತ್ರಣ ಪತ್ರಿಕೆಯಲ್ಲಿ ಈ ನಾಲ್ವರ ಹೆಸರನ್ನು ಕೈಬಿಡಲಾಗಿದೆ.
ಕಾಟಾಚಾರದ ಕಾರ್ಯಕ್ರಮ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನ.10ರಂದು ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಟಿಪ್ಪುಸುಲ್ತಾನ ಜಯಂತಿಯು ಕಾಟಾಚಾರದ ಕಾರ್ಯಕ್ರಮ ಎಂಬುದಾಗಿ ಮುಸ್ಲಿಮ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ನಡೆಸುವ ಈ ಕಾರ್ಯಕ್ರಮ ಕಾಟಾಚಾರದ್ದಾಗಿದ್ದು, ಟಿಪ್ಪು ಜಯಂತಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಡೆಸುವ ಬದಲು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ. ಜಿಲ್ಲಾಡಳಿತವು ಈ ಕಾರ್ಯಕ್ರಮವನ್ನು ಕೇವಲ 20-30ನಿಮಿಷದಲ್ಲಿ ಮುಗಿಸುವ ತಯಾರಿಯಲ್ಲಿರು ವಂತೆ ಕಾಣುತ್ತಿದೆ. ಇದು ಟಿಪ್ಪು ಹೆಸರಿನಲ್ಲಿ ಕಣ್ಣಿಗೆ ಮಣ್ಣೆರೆಚುವ ಕೆಲಸವಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಆರೋಪಿಸಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ ಧಪ್ ಕಾರ್ಯಕ್ರಮ ಇರುವುದಾಗಿ ತಿಳಿಸಲಾಗಿದೆ. ಆದರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುವ ಕೋರ್ಟ್ ಹಾಲ್ ಇಕ್ಕಟ್ಟಾದ ಸ್ಥಳವಾಗಿದ್ದು, ಇಲ್ಲಿ ಧಪ್ ಕಾರ್ಯಕ್ರಮವನ್ನು ಹೇಗೆ ನಡೆಸುತ್ತಾರೆ ಎಂದು ಮುಸ್ಲಿಮ್ ಮುಖಂಡರು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮ ಕೂಡ ವಿವಾದಕ್ಕೆ ಕಾರಣ ವಾಗಿತ್ತು. ಇದರಲ್ಲಿ ಯಾವುದೇ ಜನಪ್ರತಿನಿಧಿಗಳು ಭಾಗವಹಿಸದ ಬಗ್ಗೆ ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.







