ನೈರುತ್ಯ ಕ್ಷೇತ್ರಗಳು: 21ರಂದು ಕರಡು ಮತದಾರರ ಪಟ್ಟಿ ಪ್ರಕಟ
ಮಂಗಳೂರು, ನ. 7: ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಕರಡು ಪಟ್ಟಿ ನ.2ರಂದು ಪ್ರಕಟವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಮುಂದಿನ ವರ್ಷ ಜೂನ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ತಯಾರಿಸಲಾಗುತ್ತಿದೆ. ಈ ಹಿಂದಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, ಪ್ರಸಕ್ತ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ. ನ.21ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಮತ್ತೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು ಈ ಅವಧಿಯಲ್ಲಿ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.
ಅರ್ಜಿ ಸಲ್ಲಿಸುವಾಗ ಚುನಾವಣಾ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಕಡ್ಡಾಯವಲ್ಲ. ಬ್ಯಾಂಕ್ ಪಾಸ್ ಪುಸ್ತಕ ಅಥವಾ ಇನ್ಯಾವುದೇ ಅಧಿಕೃತ ಗುರುತಿನ ಚೀಟಿ ಸಲ್ಲಿಸಬಹುದು. ದಾಖಲೆಗಳ ಜೆರಾಕ್ಸ್ ಪ್ರತಿಗೆ ಗಜೆಟೆಡ್ ಅಧಿಕಾರಿಯ ದೃಢೀಕರಣ ಇಲ್ಲದಿದ್ದರೆ, ಒರಿಜಿನಲ್ ದಾಖಲೆಯನ್ನು ಅರ್ಜಿ ಸಲ್ಲಿಸುವಾಗ ಹಾಜರುಪಡಿಸಿ, ಅರ್ಜಿ ಸ್ವೀಕರಿಸುವ ಅಧಿಕಾರಿಯು ಅಲ್ಲಿಯೇ ದೃಢೀಕರಿಸಿಕೊಳ್ಳಬಹುದು ಎಂದು ಕುಮಾರ್ ವಿವರಿಸಿದರು.
ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲ ಮೂಡಿಸದಂತೆ ಅವರು ತಹಶೀಲ್ದಾರ್‌ಗಳಿಗೆ ತಾಕೀತು ಮಾಡಿದರು.ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸುವ ಶಿಕ್ಷಕರು ಪ್ರೌಢಶಾಲೆ ಮತ್ತು ಅದಕ್ಕಿಂತ ಮೇಲಿನ ತರಗತಿಗಳ ಶಿಕ್ಷಕರಾಗಿರಬೇಕು. ಕನಿಷ್ಠ 3 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರಬೇಕು. ಅನುದಾನರಹಿತ ವಿದ್ಯಾಸಂಸ್ಥೆಗಳ ಶಿಕ್ಷಕರ ಅರ್ಜಿಗಳನ್ನು ಸಂಬಂಧಪಟ್ಟ ಬಿ.ಇ.ಒ.ಗಳು ದೃಢೀಕರಿಸಿರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಪದವೀಧರರ ಕ್ಷೇತ್ರಕ್ಕೆ 3,776 ಅರ್ಜಿಗಳು ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 1,740 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಜಂಟೀ ಆಯುಕ್ತೆ ಗಾಯತ್ರಿ ನಾಯಕ್, ಚುನಾವಣಾ ತಹಶೀಲ್ದಾರ್ ಮಾಣಿಕ್ಯ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ ಮತ್ತಿತರರು ಉಪಸ್ಥಿತರಿದ್ದರು.







