ಸರ್ವ ಧರ್ಮೀಯರನ್ನು ಬೆಸೆಯುವ ಶಕ್ತಿ ಉರ್ದು ಭಾಷೆಗಿದೆ: ವೌಲಾನ ಶುಐಬ್ ಹುಸೈನಿ

ಮಂಗಳೂರು, ನ. 7: ಎಲ್ಲ ಧರ್ಮೀಯರನ್ನು ಬೆಸೆಯುವ ಶಕ್ತಿ ಉರ್ದು ಭಾಷೆಗೆ ಇದೆ ಎಂದು ಧಾರ್ಮಿಕ ವಿದ್ವಾಂಸ ಹಾಗೂ ನಗರದ ಕಚ್ಚಿ ಮಸೀದಿಯ ಖತೀಬ್ ಮೌಲಾನ ಶುಐಬ್ ಹುಸೈನಿ ನದ್ವಿ ಅಭಿಪ್ರಾಯಪಟ್ಟರು.
ಅಂಜುಮನ್ ತರಖ್ಖೀ ಎ ಉರ್ದು ಮತ್ತು ಅರಬಿಕ್ ಸಂಸ್ಥೆ ಆಶ್ರಯದಲ್ಲಿ ಉರ್ದು ಭಾಷಾಭಿವೃದ್ಧಿಯ ನಿಟ್ಟಿನಲ್ಲಿ ಇತ್ತೀಚೆಗೆ ಬೋಳಾರದ ಶಾದಿಮಹಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉರ್ದು ಭಾಷೆಯ ಉಗಮ ಮತ್ತು ಅದರ ಅಭಿವೃದ್ಧಿಯಲ್ಲಿ ದೇಶದ ಸರ್ವ ಧರ್ಮೀಯರ ಪಾತ್ರವಿರುವುದು ಗಮನಾರ್ಹ. ಉರ್ದು ಭಾಷೆಯನ್ನು ಬೆಳೆಸುವುದು ಎಲ್ಲ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೌಲಾನ ಅಬ್ದುಸ್ಸಲಾಂ ಮದನಿ ವಹಿಸಿ ಮಾತನಾಡಿದರು. ಶಾದಿಮಹಲ್‌ನ ನಿಕಟಪೂರ್ವ ಅಧ್ಯಕ್ಷ ರಶೀದ್ ಖಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಹನೀಫ್ ಮಾಸ್ಟರ್ ಸ್ವಾಗತಿಸಿದರು. ಆಬಿದ್ ಅಸ್ಗರ್ ವಂದಿಸಿದರು. ರಹ್ಮತುಲ್ಲಾಹ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಉರ್ದು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸುಮಾರು 40 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಜೇತರಿಗೆ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.





