ನರೇಂದ್ರ ಮೋದಿಯವರ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ: ಕುಮಾರಸ್ವಾಮಿ
“ಕುಮಾರ ಪರ್ವ-2018 ಹೊಸ ಮನ್ವಂತರದ ಶುಭಾರಂಭ” ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು, ನ.7: ದೇಶದ ಎರಡು ರಾಷ್ಟ್ರೀಯ ಪಕ್ಷಗಳು ರೈತರ ಹಿತಕಾಯುವಲ್ಲಿ ವಿಫಲವಾಗಿದ್ದು, ಹಾಗಾಗಿ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಜೆಡಿಎಸ್ ರಾಜ್ಯಧ್ಯಾಕ್ಷ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಲವಾಲ ಹೋಬಳಿಯ ಲಿಂಗದೇವರಕೊಪ್ಪಲಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮಂಗಳವಾರ ಆರಂಭಗೊಂಡ “ಕುಮಾರ ಪರ್ವ-2018 ಹೊಸ ಮನ್ವಂತರದ ಶುಭಾರಂಭ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ರೈತರ ಹಿತಕಾಪಾಡಲು ರಾಜ್ಯದ ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಅವರಿಗಾಗಲಿ, ಕೇಂದ್ರದ ನರೇಂದ್ರ ಮೋದಿ ಅವರಿಗಾಗಲಿ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯದ ರೈತರ ಸಾಲ ಮನ್ನಾ ಮಾಡಿ ಎಂದರೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಬಿಜೆಪಿಯವರು ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡಿದರೆ, ನಾನು ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯರವರು ಹೇಳುತ್ತಾರೆ. ಇದು ಇವರ ರೈತರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಅತೀವೃಷ್ಟಿ ಅನಾವೃಷ್ಟಿಯಿಂದ ತತ್ತರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಾಮೇಷ ಎಣಿಸುತ್ತಿದ್ದಾರೆ. ಮುಖ್ಯಮಂತ್ರಿ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ರಾಜ್ಯದ ರೈತರ 50 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದು ದೊಡ್ಡ ವಿಷಯವೇನಲ್ಲ ಎಂದು ಹೇಳಿದರು.
ನನಗೆ ರಾಜ್ಯದ ಜನ ಆಶೀರ್ವಾದ ಮಾಡಿ ಮತ್ತೆ ಅಧಿಕಾರಕ್ಕೆ ತಂದರೆ ಎರಡೇ ವರ್ಷದಲ್ಲಿ ರಾಜ್ಯದ ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಜತೆಗೆ ಮುಂದೆ ಎಂದೂ ರೈತರುರು ಸಾಲ ಮಾಡದ ರೀತಿ ನನ್ನ ಕಲ್ಪನೆಯ ಹೊಸ ಯೋಜನೆಗಳನ್ನು ಜಾರಿಗೆ ತಂದು ಅವರು ನಗರ ಪಟ್ಟಣಗಳಿಗೆ ಗುಳೆ ಹೋಗದೆ ತಮ್ಮ ಜಮೀನಿನಲ್ಲಿ ತಿಂಗಳಿಗೆ 15 ರಿಂದ 20 ಸಾವಿರ ಆದಾಯ ಬರುವ ರೀತಿಯ ಮಾಡುವುದಾಗಿ ಭರವಸೆ ನೀಡಿದರು.
ರೈತನ ಮಗ ಎಂದು ಹೇಳುವ ನೀವು ರೈತರ ಪರ ಯಾವ ಯೋಜನೆಗಳನ್ನು ಹಾಕಿಕೊಂಡಿದ್ದೀರಿ, ಸರ್ಕಾರದ ಸಾಧನೆಗಳನ್ನು ತಿಳಿಸಲು ಮಾಧ್ಯಮಗಳಿಗೆ ನೂರಾರು ಕೋಟಿ ಜಾಹೀರಾತು ನೀಡುತ್ತೀರಿ. ವಿಧಾನ ಸಭೆ ವಜ್ರಮಹೋತ್ಸವಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತೀರಿ. ಆದರೆ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಳೆ ಬೆಳೆ ಇಲ್ಲದೇ 30-40 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ರೈತರಿಗೆ ಏನು ಕೊಟ್ಟೀದ್ದೀರಿ ಎಂದು ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.
ಕೇಂದ್ರ ಮೋದಿ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಜನರನ್ನು ಸಂಕ್ಕಷ್ಟಕ್ಕೀಡು ಮಾಡಿತು. ನಂತರ ಜಿಎಸ್‍ಟಿ ಹೇರಿ ದೇಶದ ಜನರು ಕುಗ್ಗುವಂತೆ ಮಾಡಿತು. ನರೇಂದ್ರ ಮೋದಿಯವರ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ. ರೈತರ ಬೆಳೆ ದ್ವಿಗುಣಗೊಳ್ಳಲು 2024ರ ವರೆಗೆ ಕಾಲವಾಕಾಶ ನೀಡಿ ಎಂದು ಮೋದಿ ಹೇಳುತ್ತಾರೆ. ಆದರೆ ನಾನು ಅಧಿಕಾರಕ್ಕೆ ಬಂದರೆ ಎರಡೇ ವರ್ಷದಲ್ಲಿ ಈ ಕೆಲಸ ಮಾಡುವುದಾಗಿ ಹೇಳಿದರು.
ಇದಕ್ಕೂ ಮೊದಲು ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಹಾಗು ಉತ್ತನಹಳ್ಳಿಯಲ್ಲಿರುವ ಜ್ವಾಲಾಮುಖಿ ತ್ರಿಪುರಸುಂದರಿ ಅಮ್ಮನವರಿಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ನಿ ಸಮೇತ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿಕಾಸ ಯಾತ್ರೆಯ ಬಸ್‍ಗೆ ಕುಮಾರಸ್ವಾಮಿ ಹಾಗು ಪತ್ನಿ ಅನಿತಾಕುಮಾರಸ್ವಾಮಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಬಂಡೆಪ್ಪ ಕಾಶಂಪೂರ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕರಾದ ಕೋನರೆಡ್ಡಿ, ಸಾ.ರಾ.ಮಹೇಶ್, ಮಾಜಿ ಶಾಸಕ ಅಂದಾನಿ, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ್, ಮೇಯರ್ ರವಿಕುಮಾರ್ ಎಂ.ಜೆ. ತಾ.ಪಂ.ಅಧ್ಯಕ್ಷೆ ಕಾಳಮ್ಮ, ಜಿ.ಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಲೋಕೇಶ್ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಹರೀಶ್‍ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೋಲಿಸಲು ಎಲ್ಲಾ ಪಕ್ಷದ ನಾಯಕರುಗಳು ಒಂದಾಗಬೇಕಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರೇ ಸಾಕು. ಸಿದ್ದರಾಮಯ್ಯ ಅವರ ಹಣ ಬಲ, ಅಧಿಕಾರದ ದರ್ಪ ಮುಂದಿನ ಚುನಾವಣೆಯಲ್ಲಿ ನಡೆಯುವುದಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ







