ನಕಲಿ ದಾಖಲೆ ಸೃಷ್ಠಿಸಿ ಖಾತೆ ಬದಲಾವಣೆ: ವಿಶೇಷ ತಹಶೀಲ್ದಾರ್ ಸಹಿತ 6 ಮಂದಿ ವಿರುದ್ಧ ಪ್ರಕರಣ
ಬ್ರಹ್ಮಾವರ, ನ.7: ನಕಲಿ ದಾಖಲೆ ಸೃಷ್ಠಿಸಿ ಖಾತೆ ಬದಲಾವಣೆ ಮಾಡಿದ ಹಿಂದಿನ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ತಿಪ್ಪೇಸ್ವಾಮಿ ಸೇರಿದಂತೆ ಆರು ಮಂದಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ತಿಪ್ಪೇಸ್ವಾಮಿ, ಕಂದಾಯ ನಿರೀಕ್ಷಕರಾದ ಶಿವರಾಮ ಮತ್ತು ವಸಂತ, ದಾಖಲೆ ನಿರ್ವಾಹಕ ಹರೀಶ್, ಡಾಟ ಎಂಟ್ರಿ ಅಭಿಲಾಷ್ ಹಾಗೂ ಅವಿನಾಶ್ ಎಂಬವರು ಆರೋಪಿಗಳಾಗಿದ್ದಾರೆ.
ಇವರು ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಅಧೀನದಲ್ಲಿ ಕರ್ತವ್ಯದಲ್ಲಿ ರುವಾಗ 2016ರ ಎ.29ರಂದು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಮತ್ತು ಖಾತೆ ಬದಲಾವಣೆ ಮಾಡದಂತೆ ಆಕ್ಷೇಪಣೆ ಅರ್ಜಿ ಇದ್ದ ಚಾಂತಾರು ಗ್ರಾಮದಲ್ಲಿರುವ ಹೇರೂರಿನ ಸದಾಶಿವ ಶೆಟ್ಟಿ ಮತ್ತು ಅವರ ಕುಟುಂಬದ 120 ಜನರ ಹಕ್ಕಿನ ಭೂಮಿಗಳ ಪಹಣಿ ಪತ್ರಿಕೆಗಳನ್ನು ವಿಜಯ ಬಾನು ಮತ್ತು ಕುಟುಂಬದವರ ಹೆಸರಿಗೆ ಅಧಿಕಾರ ದುರ್ಬಳಕೆ ಮಾಡಿ ಸುಳ್ಳು ನಕಲಿ ದಾಖಲೆ, ನಕಲಿ ಆರ್‌ಟಿಸಿ ದಾಖಲೆಯನ್ನು ಸೃಷ್ಟಿಸಿ ಖಾತೆ ಬದಲಾವಣೆ ಮಾಡಿದ್ದಾರೆ ಮತ್ತು ನಕಲಿ ದಾಖಲೆಗಳನ್ನು ನಾಪತ್ತೆ ಮಾಡಿ ಸಾಕ್ಷಿ ನಾಶ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





