ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಯೋಜನೆಗೆ ಚಾಲನೆ
ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ

ಬಂಟ್ವಾಳ, ನ. 7: ತಾಲೂಕಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಮುದ್ದೇನಹಳ್ಳಿ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನ ವತಿಯಿಂದ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಒದಗಿಸುವ ಯೋಜನೆಗೆ ಚಾಲನೆ ನೀಡಲಾಯಿತು.
ಅಳಿಕೆ ಸತ್ಯಸಾಯಿ ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲ ಸೋಮಶೇಖರ ಪ್ರಭು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಯನ್ನು ಶಾಲೆಗೆ ತರಲು ಕಾರಣೀಕರ್ತರಾದ ನಾರಾಯಣ ಗೌಡ ಮಾತನಾಡಿ, ಬಂಟ್ವಾಳ ತಾಲೂಕಿನ 9 ಕಡೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.
ಈ ಸಂದರ್ಭ ಬೊಂಡಾಲ ಜಗನ್ನಾಥ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ, ಗ್ರಾಪಂ ಸದಸ್ಯರಾದ ಗೀತಾ, ವಿಶಾಲಾಕ್ಷಿ, ಜಯರಾಜ್, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಏಲಬೆ ಪದ್ಮನಾಭ ಮಯ್ಯ, ಶಿಕ್ಷಣ ಸಂಯೋಜಕಿ ಪುಷ್ಪಾ, ಪತ್ರಕರ್ತರಾದ ಹರೀಶ ಮಾಂಬಾಡಿ, ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ ಸ್ವಾಗತಿಸಿ, ಶಿಕ್ಷಕ ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಸದಾಶಿವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಉಪಾಹಾರ ಮಂದಿರದಲ್ಲಿ ಪೋಷಕರಿಂದಲೇ ಉಪಾಹಾರ ವಿತರಿಸಲಾಯಿತು.





