ಅರುಣಾಚಲ ಪ್ರದೇಶಕ್ಕೆ ರಕ್ಷಣಾ ಸಚಿವೆ ಭೇಟಿ: ಚೀನಾ ಆಕ್ಷೇಪಕ್ಕೆ ಸೇನೆ ಸವಾಲು

ಹೊಸದಿಲ್ಲಿ, ನ.7: ಭಾರತೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರುಣಾಚಲ ಪ್ರದೇಶಕ್ಕೆ ಭೇಟಿಯ ವಿರುದ್ಧ ಚೀನಾದ ಟೀಕೆಯನ್ನು ನಿರಾಕರಿಸಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇನೆಯನ್ನು ನಿಯೋಜಿಸಿರುವ ದೇಶದ ಪ್ರತಿ ಮೂಲೆಗೂ ರಕ್ಷಣಾ ಸಚಿವರು ಭೇಟಿ ನೀಡುತ್ತಾರೆ ಎಂದು ತಿಳಿಸಿದರು.
ವಿವಿಧ ವಿಷಯಗಳನ್ನು ತಿಳಿಯುವ ಸಲುವಾಗಿ ರಕ್ಷಣಾ ಸಚಿವರು ಸೈನಿಕರನ್ನು ಭೇಟಿಯಾಗುತ್ತಾರೆ ಮತ್ತು ಇಂಥಾ ಭೇಟಿಗಳಿಂದ ಸಶಸ್ತ್ರಪಡೆಗಳ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ರಾವತ್ ತಿಳಿಸಿದರು.
ನಿರ್ಮಲಾ ಸೀತಾರಾಮನ್ ಶನಿವಾರ ಮತ್ತು ಭಾನುವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು ಇದನ್ನು ವಿರೋಧಿಸಿದ ಚೀನಾ ವಿವಾದಿತ ಪ್ರದೇಶಗಳಿಗೆ ಸಚಿವರು ಭೇಟಿ ಮಾಡುವುದು ಆ ಪ್ರದೇಶದ ಶಾಂತಿ ಸ್ಥಾಪನೆಯ ಯತ್ನಕ್ಕೆ ಹಿನ್ನಡೆಯುಂಟು ಮಾಡುತ್ತದೆ ಎಂದು ತಿಳಿಸಿತ್ತು.
ಭಾನುವಾರ ಸೀತಾರಾಮನ್ ಚೀನಾದ ಗಡಿಭಾಗದಲ್ಲಿರುವ ಅಂಜವ್ ಜಿಲ್ಲೆಗೆ ಭೇಟಿ ನೀಡಿ ರಕ್ಷಣಾ ತಯಾರಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದರಿಂದ ಕುಪಿತಗೊಂಡ ಚೀನಾ ಭಾರತೀಯ ರಕ್ಷಣಾ ಸಚಿವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಚೀನಾದ ನಿಲುವನ್ನೂ ನೀವು ಅರಿತಿರಬೇಕು ಎಂದು ತಿಳಿಸಿತ್ತು.
ಈ ಬಗ್ಗೆ ಚೀನಾದ ವಿದೇಶ ಸಚಿವಾಲಯದ ವಕ್ತಾರ ಹುವಾ ಚುನ್‌ಯಿಂಗ್ ಮಾಧ್ಯಮ ಹೇಳಿಕೆಯನ್ನು ನೀಡಿದ್ದರು. ಚೀನಾ ಮತ್ತು ಭಾರತದ ಪೂರ್ವಗಡಿಯ ಬಗ್ಗೆ ವಿವಾದವಿದ್ದು ಭಾರತದ ರಕ್ಷಣಾ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿರುವುದು ಪ್ರದೇಶದ ಶಾಂತಿಪಾಲನೆ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಆಕೆ ತಿಳಿಸಿದ್ದರು.
ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗ ಎಂದು ವಾದಿಸುವ ಚೀನಾ ಈ ಪ್ರದೇಶಕ್ಕೆ ಭಾರತದ ಉನ್ನತ ಅಧಿಕಾರಿಗಳ ಭೇಟಿಯನ್ನು ವಿರೋಧಿಸುತ್ತಲೇ ಬಂದಿದೆ.
ಜೈಶ್-ಎ-ಮುಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್‌ನ ಸೋದರಳಿಯನನ್ನು ಕಳೆದ ರಾತ್ರಿ ಕಾಶ್ಮೀರದಲ್ಲಿ ಹತ್ಯೆ ನಡೆಸಿರುವ ಬಗ್ಗೆ ರಾವತ್‌ರನ್ನು ಪ್ರಶ್ನಿಸಿದಾಗ, ಸೇನೆಯ ಗುರಿ ಭಯೋತ್ಪಾದನೆಯನ್ನು ನಿಗ್ರಹಿಸುವುದಷ್ಟೇ ಆಗಿದೆ ಎಂದು ನುಡಿದರು. ಆತ ಮಸೂದ್ ಸೋದರಳಿಯನೇ ಅಥವಾ ಇನ್ಯಾರೋ ಎಂಬುದು ಮುಖ್ಯವಲ್ಲ. ನಮ್ಮ ಗುರಿ ಭಯೋತ್ಪಾದನೆಯನ್ನು ನಿಗ್ರಹಿಸುವುದೇ ಆಗಿದೆ ಎಂದು ರಾವತ್ ತಿಳಿಸಿದರು. ಮೃತರ ಬಳಿ ಎಂ4 ರೈಫಲ್‌ಗಳು ಸಿಕ್ಕಿರುವುದು ಉಗ್ರರಿಗೆ ಗಡಿಯಾಚೆಯಿಂದ ನೆರವು ದೊರಕುತ್ತಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದರು.







