ದರೋಡೆ ಪ್ರಕರಣ: 8 ಆರೋಪಿಗಳ ಬಂಧನ
ತುಮಕೂರು, ನ.7: ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಲಾರಿಗಳನ್ನು ನಿಲ್ಲಿಸಿ ಊಟ ಮಾಡಿ ವಿಶ್ರಾಂತಿ ಪಡೆಯುವ ಲಾರಿಗಳನ್ನೇ ಟಾರ್ಗೇಟ್ ಮಾಡಿ ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ, ಅವರ ಬಳಿಯಿದ್ದ ಮೊಬೈಲ್, ಹಣ, ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೊಚುತಿದ್ದ ತಂಡವೊಂದನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ನಗರದ ಜಾಸ್ ಟೋಲ್‍ನಿಂದ ಚಿತ್ರದುರ್ಗದವರೆಗೆ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುವ ಲಾರಿ, ಇನ್ನಿತರ ವಾಹನಗಳ ಚಾಲಕರನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತಿದ್ದು, ಹಲವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತಂಡವೊಂದರನ್ನು ರಚಿಸಲಾಗಿತ್ತು.
ತಂಡ ಗಸ್ತಿನಲ್ಲಿರುವ ಸಂದರ್ಭದಲ್ಲಿ ಊರುಕೆರೆ ಬಳಿ ಎರಡು ಮೋಟಾರ್ ಸೈಕಲ್‍ನಲ್ಲಿ ಹೊಂಚು ಹಾಕುತಿದ್ದ ತಂಡವೊಂದನ್ನು ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಿದಾಗ ಅವರ ಬಳಿ ಕಾರದ ಪುಡಿ, ಮಾರಾಕಾಸ್ತ್ರಗಳು ದೊರೆತ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರನ್ನು ಮಲ್ಲಪ್ಪ ಶಂಕರ ಘಾಟಿಗೆ(24), ಕಿರಣ್‍ಕು ಮಾರ್(23), ಸಂತೋಷ್(23) ಲೋಕೇಶ್(23), ರಂಗಸ್ವಾಮಿ(23), ಚೇತನ್(19) ಭರತ್(19), ಚನ್ನಕೇಶವಮೂರ್ತಿ(39) ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು, ಭದ್ರಾವತಿ, ಹಿರಿಯೂರು, ಹಮ್ನಾಬಾದ್, ರಾಮನಗರ ಮತ್ತು ಚಿಕ್ಕನಾಯಕನಹಳ್ಳಿ ಕಡೆಯವರಾಗಿದ್ದು, ಎಲ್ಲಾ ಆರೋಪಿಗಳು ಚನ್ನಕೇಶವಮೂರ್ತಿ ನೆಲಗೆದರಹಳ್ಳಿ ಅವರ ಮನೆಯಲ್ಲಿ ಸೇರಿ ದರೋಡೆಗೆ ಸಂಚು ರೂಪಿಸುತ್ತಿದ್ದರೂ ಎನ್ನಲಾಗಿದೆ.
ಈ ಹಿಂದೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ತುಮಕೂರು ಗ್ರಾಮಾಂತರ, ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕೃತ್ಯ ನಡೆಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.
ಹೆದ್ದಾರಿ ದರೋಡೆ ತಂಡವನ್ನು ಪತ್ತೆ ಹೆಚ್ಚುವಲ್ಲಿ ಶ್ರಮಿಸಿದ ನಗರ ಡಿವೈಎಸ್ಪಿ ನಾಗರಾಜು,ತುಮಕೂರು ಗ್ರಾಮಾಂತರ ಸಿಪಿಐ ತಿವ್ಮ್ಮಯ್ಯ, ಪಿ.ಎಸ್.ಐ.ಗಳಾದ ಯೋಗಾನಂದ, ಸೋನಾರ್, ರವಿಕುಮಾರ್ ಹಾಗೂ ಸಿಬ್ಬಂದಿಗಳ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.







