ತುಮಕೂರು: ಟಿಪ್ಪು ಜಯಂತಿ ಪೂರ್ವಭಾವಿ ಸಭೆ

ತುಮಕೂರು, ನ.7: ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10 ರಂದು ಬೆಳಗ್ಗೆ 10ಕ್ಕೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಯಾವುದೇ ಮೆರವಣಿಗೆ, ಗೌಜುಗದ್ದಲಗಳಿಲ್ಲದಂತೆ ಸರಳವಾಗಿ,ಅರ್ಥಪೂರ್ಣವಾಗಿ ಟಿಪ್ಪು ಜಯಂತಿಯನ್ನು ಆಚರಿಸಿ, ಟಿಪ್ಪು ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಕುರಿತು ವಿದ್ವಾಂಸರಿಂದ ಉಪನ್ಯಾಸ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಸಲ್ಮಾನ ಜನಾಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅರ್ಹ 20 ಮಂದಿ ಹಾಗೂ ಕಳೆದ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಅರ್ಹ ತಲಾ 5 ವಿದ್ಯಾರ್ಥಿಗಳಿಗೆ ಸನ್ಮಾನಿಸಲು ಸಭೆಯಲ್ಲಿ ಒಪ್ಪಿಗೆ ನೀಡಿದರು.
ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಟಿಪ್ಪು ಜಯಂತಿಯನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ ಮನವಿ ಮಾಡಿದರು.
ಉಪಸ್ಥಿತರಿದ್ದ ಶಾಸಕ ಡಾ. ರಫಿಕ್ ಅಹ್ಮದ್ ಮಾತನಾಡಿ, ಜಯಂತಿಯಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನದ ಲಘು ಉಪಹಾರ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಸದಸ್ಯರು, ಮುಸ್ಲಿಂ ಮುಖಂಡರು, ಮುಂತಾದವರು ಹಾಜರಿದ್ದು.







