ಮುಲ್ಲರಪಟ್ಣ: ಸ್ನಾನಕ್ಕೆ ತೆರಳಿದ ಐವರು ಬಾಲಕರು ನೀರು ಪಾಲು

ಮುಹಮ್ಮದ್ ಸವಾದ್, ರಮೀಝ್, ಮುದಸ್ಸಿರ್, ಅಜ್ಮಲ್, ಅಸ್ಲಮ್
ಬಂಟ್ವಾಳ, ನ.7:ಸ್ನಾನಕ್ಕೆ ತೆರಳಿದ್ದ ಐವರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಪಂ ವ್ಯಾಪ್ತಿಯ ಮುಲ್ಲರಪಟ್ಣದ ಪಲ್ಗುಣಿ ನದಿಯಲ್ಲಿ ಸೋಮವಾರ ನಡೆದಿದೆ.
ಮುಲ್ಲರಪಟ್ಣ ಶುಂಠಿಹಿತ್ಲು ಪರಿಸರದ ನಿವಾಸಿಗಳಾದ ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಸವಾದ್, ಎಂ.ಶರೀಫ್ ಕಲ್ಲಗುಡ್ಡೆ ಎಂಬವರ ಪುತ್ರ ರಮೀಝ್, ಶರೀಫ್ ಕಲ್ಲಗುಡ್ಡೆ ಎಂಬವರ ಪುತ್ರ ಮುದಸ್ಸಿರ್, ಹಕೀಂ ಕಲ್ಲಗುಡ್ಡೆ ಎಂಬವರ ಪುತ್ರ ಅಜ್ಮಲ್, ಅಶ್ರಫ್ ಕಲ್ಲಗುಡ್ಡೆ ಎಂಬವರ ಪುತ್ರ ಅಸ್ಲಮ್ ಮೃತಪಟ್ಟ ಬಾಲಕರು.
ಮೃತರ ಪೈಕಿ ಮುದಸ್ಸಿರ್ ಎಂಬವರು ಧಾರ್ಮಿಕ ವ್ಯಾಸಾಂಗ ಮಾಡುತ್ತಿದ್ದು, ಮೂವರು ವಿದ್ಯಾರ್ಥಿಗಳಾಗಿದ್ದಾರೆ ಹಾಗೂ ಓರ್ವ ಬೇಕರಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೃತಪಟ್ಟ ಐವರೂ 17ರಿಂದ 19 ವಯಸ್ಸಿನ ಆಸುಪಾಸಿನವರಾಗಿದ್ದಾರೆ.
ಸ್ನೇಹಿತರಾಗಿರುವ ಈ ಐವರು ಸೋಮವಾರ ಶಾಲೆಗೆ ರಜೆಯಿದ್ದ ಕಾರಣ ಜೊತೆಯಾಗಿ ಬೆಳಗ್ಗೆಯಿಂದ ಮಧ್ಯಾಹ್ನ ದವರೆಗೆ ಸ್ಥಳೀಯ ಮೈದಾನವೊಂದರಲ್ಲಿ ಆಟವಾಡಿ ಬಳಿಕ ಈಜಾಡಲೆಂದು ಪಲ್ಗುಣಿ ನದಿಗೆ ತೆರಳಿದ್ದರು ಎನ್ನಲಾಗಿದೆ.
ಮೊದಲು ಈಜಾಡಲು ಮುಲ್ಲರಪಟ್ಣ ಸೇತುವೆಯಡಿಗೆ ಬಂದಿದ್ದ ಈ ಐವರನ್ನು ಗಮನಿಸಿದ್ದ ಸ್ಥಳೀಯರು ಅಲ್ಲಿಂದ ತೆರಳುವಂತೆ ಎಚ್ಚರಿಸಿದ್ದರು ಎನ್ನಲಾಗಿದೆ. ಬಾಲಕರು ಅಲ್ಲಿಂದ ಹಿರಿದೇಲ್ ಕೋಟೆಯ ಮೂಲಕ ತೆರಳಿ ನದಿಗಿಳಿದಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿಯಾದರೂ ಬಾಲಕರು ಮನೆಗೆ ಬಾರದಿರು ವುದರಿಂದ ಮನೆಮಂದಿ ಮೊಬೈಲ್ಗೆ ನಿರಂತರ ಕರೆ ಮಾಡಿದ್ದಾರೆನ್ನಲಾಗಿದೆ. ಆದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆ ಮಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ನದಿ ಬದಿಯಲ್ಲಿ ಬಾಲಕರ ಬಟ್ಟೆಗಳು, ಮೊಬೈಲ್, ವಾಚ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದೆ.
ಮಂಗಳವಾರ ಬೆಳಗ್ಗೆ ಸವಾದ್ನ ಮೃತದೇಹ ಸೇತುವೆ ಅಡಿಯಲ್ಲಿ ಪತ್ತೆಯಾಗಿದೆ. ಇದರಿಂದ ಐವರ ಬಾಲಕರು ನೀರುಪಾಲಾಗಿರಬಹುದು ಎಂಬುದು ಖಚಿತವಾಯಿತು.
ಬಂಟ್ವಾಳ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಮುಳು ಗುಗಾರರ ಸಹಕಾರದೊಂದಿಗೆ ಶೋಧಕಾರ್ಯ ನಡೆಸ ಲಾಯಿತು. ಮಧ್ಯಾಹ್ನ 12ಗಂಟೆಯ ಸುಮಾರಿಗೆ ಪೊದೆಯೊಂದರಲ್ಲಿ ಅಜ್ಮಲ್, ರಮೀಝ್ ಮತ್ತು ಅಸ್ಲಂರ ಮೃತ ದೇಹ ಜೊತೆಯಾಗಿ ಪತ್ತೆಯಾಗಿವೆ. ಮುದಸ್ಸಿರ್ನ ಮೃತ ದೇಹ ರಾತ್ರಿ 9 ಗಂಟೆಯ ಸುಮಾರಿಗೆ ಪತ್ತೆಯಾಯಿತು.
ಐವರ ಪೈಕಿ ಒಬ್ಬ ಮೊದಲು ಮುಳುಗಿದ್ದು ಆತನನ್ನು ರಕ್ಷಿಸಲು ಹೋಗಿ ಐವರು ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ. ಈ ದಾರುಣ ಘಟನೆಯಿಂದ ಅರಳ, ಮುಲ್ಲರಪಟ್ಣ, ಶುಂಠಿಹಿತ್ಲು ಪರಿಸರದಲ್ಲಿ ಸ್ಮಶಾನ ವೌನ ಆವರಿಸಿದ್ದು, ಮೃತ ಬಾಲಕರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಾಲ್ಕು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ನದಿ ದಾಟುತ್ತಿದ್ದ ವೇಳೆ ಯುವಕನೊಬ್ಬ ನೀರಿಗೆ ಬಿದ್ದು ಮೃತಪಟ್ಟಿದ್ದರೆ, ಮರಳುಗಾರಿಕೆಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ದಾಗ ಕಾರ್ಮಿಕರೊಬ್ಬರು ನದಿಗೆ ಬಿದ್ದು ಮೃತಪಟ್ಟಿದ್ದರು.
ಇದೀಗ ಅದೇ ಸ್ಥಳದಲ್ಲಿ ಐವರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.
ಸ್ಥಳೀಯ ಮುಳುಗು ತಜ್ಞರ ಸಹಕಾರ: ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞ ರೊಂದಿಗೆ ಮುಲ್ಲರಪಟ್ಣದ ಸ್ಥಳೀಯ ಮುಳುಗು ತಜ್ಞರಾದ ಮುಸ್ತಫಾ ಎಂ.ಜಿ., ರಫೀಕ್ ಕಲ್ಲಗುಡ್ಡೆ, ಸದಕ, ಕಮಲ್, ಬರಾಕ್, ರಝಾಕ್ ಎಸ್. ಮತ್ತಿತರರು ಶೋಧ ಕಾರ್ಯಚರಣೆಯಲ್ಲಿ ಸಹಕರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂ ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ರಮಾನಾಥ ರೈ ಸಾಂತ್ವನ
ಸರಕಾರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು, ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತದನಂತರ ನೀರುಪಾಲಾದ ಬಾಲಕರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವ್ವನ ಹೇಳಿ ದ್ದಾರೆ. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿ ಗಳೊಂದಿಗೆ ಚರ್ಚಿಸಿ ಮೃತ ಬಾಲಕರ ಕುಟುಂಬಕ್ಕೆ ಪರಿ ಹಾರ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.







