ಜೆಲಿಗೆ ಹೋಗಿದ್ದೇ ಬಿಜೆಪಿಯವರ ಸಾಧನೆ: ಜಿ.ಪರಮೇಶ್ವರ್ ಲೇವಡಿ

ಚಿಕ್ಕಮಗಳೂರು, ನ.7: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತಮ್ಮ ವಿವಿಧ ಯೋಜನೆಗಳ ಮೂಲಕ ರಾಜ್ಯದ 4.50 ಕೋಟಿ ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸಿದ್ದಾರೆ. ಆದರೆ ಬಿಜೆಪಿಯವರದು ತಮ್ಮ ಆಡಳಿತಾವಧಿಯಲ್ಲಿ ಜೈಲಿಗೆ ಹೋಗಿದ್ದೇ ಸಾಧನೆಯಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಲೇವಡಿ ಮಾಡಿದರು.
ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಮತಗಟ್ಟೆ ಅಧ್ಯಕ್ಷರ ಭಾಗವಹಿಸಿ ಸಮಾವೇಶದಲ್ಲಿ ಮಾತನಾಡಿ, ಹರಕಲು ಸೀರೆ, ಮುರುಕಲು ಸೈಕಲ್ ನೀಡಿದ್ದೇ ಬಿಜೆಪಿಯವರ ಸಾಧನೆ ಎಂದು ವ್ಯಂಗ್ಯವಾಡಿದ ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪತಮ್ಮ ಪಕ್ಷ ಗೆದ್ದರೆ ರೈತರಿಗೆ ಸಾಲ ಮನ್ನಾ ಮಾಡುವ ಬಗ್ಗೆ, ಹೊಸ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎಂದು ನುಡಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂರು ಮುಕ್ಕಾಲು ಜನಗಳಿರಲಿಲ್ಲ. ಈ ಕುರಿತು ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮೀತ್‌ಷಾ ರಾಜ್ಯದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಕುಟುಕಿದರು.
ಬಿಜೆಪಿ ಪರಿವರ್ತನಾ ಯಾತ್ರೆ ನಡೆಸುತ್ತಿರುವುದು ಯಾರ ಪರಿವರ್ತನೆಗೆ ಎಂದು ಪ್ರಶ್ನಿಸಿದ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪತಮ್ಮ ಸಹ ಸಚಿವರೊಂದಿಗೆ ಜೈಲಿಗೆ ಹೋಗಿ ಬಂದ ನಂತರ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ರೂಪದಲ್ಲಿ ಪರಿವರ್ತನಾ ಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯಿಂದ ಏನು ಉಪಯೋಗವಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ.ಇವರ ಪರಿವರ್ತನಾ ಯಾತ್ರೆಯನ್ನು ಕೂಡಲೇ ನಿಲ್ಲಿಸುವುದು ಸೂಕ್ತ ಎಂದರು.
ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯವರು ಸಿದ್ದು ಸರಕಾರ ಕಳೆದ 4 ವರ್ಷಗಳಿಂದ ನಿದ್ದೆಮಾಡಿ ಈಗ ಎದ್ದು ನಿಂತಿದೆ. ಅವರು ಏನು ಸಾಧನೆ ಮಾಡಿದ್ದಾರೆ ಎಂದು ಹೇಳಲಿ ಎಂದು ಕೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪುಸ್ತಕ ನೀಡಿ ಅವರಿಗೆ ಓದಲು ಹೇಳಿ ಎಂದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಮತ್ತು ಸಚಿವರು ಭ್ರಷ್ಟಾಚಾರ ಮಾಡಲಿಲ್ಲ. ಸ್ವಚ್ಛ, ಪಾರದರ್ಶಕ ಆಡಳಿತ ನೀಡಿದ್ದೇವೆ. ನಾವು ಭ್ರಷ್ಟಾಚಾರ ಮಾಡಿರುವ ಬಗ್ಗೆ ರಾಜ್ಯದ ಜನತೆಯ ಮುಂದೆ ಇಡಲು ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದೇನೆ ಎಂದು ಹೇಳಿದರು.
ಶಾಸಕ ಸಿ.ಟಿ.ರವಿ ಅವರ ಸಾಧನೆ ಏನೆಂದು ಕೇಳಿದರೆ, ಅವರು ಗುತ್ತಿಗೆದಾರ ರಾಗಿರುವುದೇ ಸಾಧನೆ. ತಾನು ಆರು ತಿಂಗಳು ಈ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಕುರಿತು ನನಗೆ ಅನುಭವಕ್ಕೆ ಬಂದಿದೆ. ಸಿ.ಟಿ.ರವಿ ಈ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.







