ಚಿಕ್ಕಮಗಳೂರು: ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಮನವಿ
ಚಿಕ್ಕಮಗಳೂರು, ನ.7: ನಗರದ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ರಸ್ತೆ ಗುಂಡಿಗಳನ್ನು ಮುಚ್ಚಿ ದುರಸ್ತಿಪಡಿಸುವಂತೆ ಆಗ್ರಹಿಸಿ ಯುವಶಕ್ತಿ ಮಾನವತಾ ವೇದಿಕೆ ಮಂಗಳವಾರ ಅಪರ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಪ್ರಮುಖ ರಸ್ತೆಗಳು ಡಾಂಬರೀಕರಣ ಕಂಡು ಬಹಳ ವರ್ಷಗಳೇ ಕಳೆದಿದ್ದು, ಇದನ್ನು ದುರಸ್ತಿಪಡಿಸುವ ಮೂಲಕ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಕೂಡಲೇ ಸಂಬಂಧಿಸಿದ ಇಲಾಖೆಯು ನಗರದ ರಸ್ತೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ದೀಪ ನರ್ಸಿಂಗ್ ಹೋಂ ಎದುರಿನ ರಸ್ತೆ, ಅಂಚೆ ಕಚೇರಿ ರಸ್ತೆಗಳು ತೀರಾ ಕಿರಿದಾಗಿವೆ. ಸಣ್ಣಪುಟ್ಟ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಇದೇ ರಸ್ತೆಯಲ್ಲಿ ಹೆಚ್ಚಾಗಿ ಸಂಚರಿಸುವ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಶೀಘ್ರ ಈ ರಸ್ತೆಗಳ ಅಗಲೀಕರಣ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದಭರ್ದಲ್ಲಿ ವೇದಿಕೆಯ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ರಂಗನಾಥ್, ಕಾರ್ಯದರ್ಶಿ ವಸೀಲ್‌ಪಾಷ, ಸದಸ್ಯ ಮಂಜು, ರಘು, ತಾರಾ ಮತ್ತಿತರರು ಉಪಸ್ಥಿತರಿದ್ದರು.







