ಮೂಲರಪಟ್ನ ನದಿಯಲ್ಲಿ ವಿದ್ಯಾರ್ಥಿಗಳ ಸಾವಿಗೆ ಮರಳು ಮಾಫಿಯಾ ಕಾರಣ: ಮುನೀರ್ ಕಾಟಿಪಳ್ಳ
ಮಂಗಳೂರು, ನ. 7: ಮೂಲರಪಟ್ನ ಪಲ್ಗುಣಿ ನದಿಯಲ್ಲಿ ಈಜಾಡಲು ಹೋದ ಹದಿಹರೆಯದ ಐವರು ವಿದ್ಯಾರ್ಥಿಗಳ ಸಾವಿಗೆ ಅಕ್ರಮ ಮರಳುಗಾರಿಕೆಯೇ ಕಾರಣ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಸರಕಾರದ ವಿವಿಧ ಇಲಾಖೆ, ರಾಜಕೀಯ ನಾಯಕರ ಬೆಂಬಲದಿಂದ ಮರಳು ಮಾಫಿಯಾ ಜೆಸಿಬಿ, ಹಿಟಾಚಿ, ಡ್ರೆಜ್ಜಿಂಗ್ ಬಳಸಿ ಅಕ್ರಮವಾಗಿ ಮರಳುಗಾರಿಕೆ ನಡೆಸಿದ್ದು, ಅದರಿಂದ ಉಂಟಾದ ಆಳವಾದ ಗುಂಡಿಗಳಿಗೆ ಸಿಲುಕಿ ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೂಲರಪಟ್ನ, ಕುಪ್ಪೆಪದವು, ಮಳಲಿ ಸಹಿತ ಫಲ್ಗುಣಿ ನದಿಯ ಉದ್ದಕ್ಕೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ರಾಜಕಾರಣಿಗಳು, ಪೊಲೀಸರು, ಗಣಿ ಇಲಾಖೆ ಸಹಿತ ಸಂಬಂಧಪಟ್ಟ ವಿವಿಧ ಇಲಾಖೆಗಳ ಶಾಮೀಲಾತಿಯಿಂದ ನಡೆಯುವ ಅಕ್ರಮ ಮರಳುಗಾರಿಕೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಮರಳು ಸಾಗಾಟದಿಂದ ಮಾಫಿಯಾ ರೀತಿ ಬೆಳೆದಿದೆ . ಹಗಲು ರಾತ್ರಿ ನಡೆಸುವ ಮರಳುಗಾರಿಕೆಯಿಂದ ಫಲ್ಗುಣಿ ನದಿ ಅಪಾಯಕ್ಕೆ ಗುರಿಯಾಗಿದೆ. ಈ ಕುರಿತು ಧ್ವನಿ ಎತ್ತುವ ಸ್ಥಳೀಯರನ್ನು ಮರಳು ಮಾಫಿಯಾ ತೋಳ್ಬಲ ಬಳಸಿ ಬಾಯಿ ಮುಚ್ಚಿಸುತ್ತದೆ ಎಂದವರು ಆರೋಪಿಸಿದ್ದಾರೆ.
ಈ ಅಕ್ರಮಗಳ ವಿರುದ್ದ ಡಿವೈಎಫ್‌ಐ ಕಳೆದ ಮೇ ತಿಂಗಳಲ್ಲಿ ಸತತವಾಗಿ ಧ್ವನಿ ಎತ್ತಿ ಜೀವನದಿ ಫಲ್ಗುಣಿ ಉಳಿಸಿ ಅಭಿಯಾನವನ್ನೇ ನಡೆಸಿತ್ತು. ಆ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಅಕ್ರಮ ಮರಳುಗಾರಿಕೆ, ಮರಳು ಸಂಗ್ರಹಗಳ ಮೇಲೆ ದಾಳಿ ನಡೆದಿದ್ದವು, ನಂತರ ವಶಪಡಿಸಿಕೊಂಡ ಮರಳನ್ನು ಟೆಂಡರ್ ನಾಟಕದ ಮೂಲಕ ಅದೇ ಮರಳು ಮಾಫಿಯಾಕ್ಕೆ ಬಿಟ್ಟುಕೊಡಲಾಗಿತ್ತು. ಆ ನಂತರವೂ ಯಂತ್ರಗಳನ್ನು ಬಳಸಿ ಮರಳುಗಾರಿಕೆ ಅವ್ಯಾಹತವಾಗಿ ಮುಂದುವರಿದ್ದು, ಜನ ಅಸಹಾಯಕತೆಯಿಂದ ಮೌನವಹಿಸಿದ್ದರು. ಈಗ ಐವರು ವಿದ್ಯಾರ್ಥಿಗಳು ಅದೇ ಅಕ್ರಮ ಮರಳುಗಾರಿಕೆಯಿಂದ ನಿರ್ಮಾಣವಾದ ಕೃತಕ ಗುಂಡಿಗಳಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆಯೂ ಬಂಟ್ವಾಳ, ಫರಂಗಿಪೇಟೆ ಭಾಗದಲ್ಲಿ ಇದೇ ರೀತಿ ಅಕ್ರಮ ಮರಳುಗಾರಿಕೆಯಿಂದ ನಿರ್ಮಾಣವಾದ ಗುಂಡಿಗೆ ಬಿದ್ದು ಹಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದ್ದರಿಂದ ದುರಂತ ಸಾವುಗಳ ಸರಣಿ ಮುಂದುವರಿದಿದೆ ಎಂದವರು ತಿಳಿಸಿದ್ದಾರೆ.
ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸಬೇಕು, ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಅಕ್ರಮ ಮರಳು ದಂಧೆಕೋರರ ಮೇಲೆ ಸಾವಿನ ಹೊಣೆ ಹೊರಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಅಕ್ರಮ ಮರಳುಗಾರಿಕೆಯೊಂದಿಗೆ ಶಾಮೀಲಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕರಣೆಯಲ್ಲಿ ಒತ್ತಾಯಿಸಿದ್ದಾರೆ.







