ಜೆಡಿಎಸ್‌ನ ಗ್ರಾಮ ವಾಸ್ತವ್ಯ ಟೀಕಿಸಲು ಬಿಜೆಪಿಗೆ ನೈತಿಕತೆಯಿಲ್ಲ: ಗಿರೀಶ್
ಚಿಕ್ಕಮಗಳೂರು, ನ.7: ಜೆಡಿಎಸ್ ನಡೆಸುವ ಗ್ರಾಮ ವಾಸ್ತವ್ಯವನ್ನು ನಿರಂತರವಾಗಿ ಟೀಕಿಸಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ್ದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜನರ ಬಳಿಗೆ ಸರಕಾರ ಹೋಗಿ ಗ್ರಾಮವಾಸ್ತವ್ಯದೊಂದಿಗೆ ಜನಸ್ಪಂದನ ಕಾರ್ಯಕ್ರಮವನ್ನು ಮಾಡಿ ಸ್ಥಳದಲ್ಲೇ ಶಾಶ್ವತ ಪರಿಹಾರವನ್ನು ನೀಡಿರುವ ಕೀರ್ತಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಬೇಕು. ಇತ್ತೀಚೆಗೆ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್ ಕುಮಾರಸ್ವಾಮಿಯ ಗ್ರಾಮ ವಾಸ್ತವ್ಯವನ್ನು ಟೀಕಿಸಿದ್ದಾರೆ. ಬಿಜೆಪಿ ಮುಖಂಡರ ರೀತಿಯಲ್ಲಿ ನಮ್ಮ ನಾಯಕರು ಹೈಟೆಕ್ ಗ್ರಾಮವಾಸ್ತವ್ಯ ಮಾಡುತ್ತಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಪ್ರಾದೇಶಿಕ ಪಕ್ಷದ ಅವಶ್ಯಕತೆ ಈ ರಾಜ್ಯಕ್ಕೆ ಇದೆ ಎಂಬ ಸಂದೇಶ ಕೇಳಿಬರುತ್ತಿದೆ ಎಂದಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿ ರೈತರೊಂದಿಗೆ ಸಂವಾದ, ಅಲ್ಲಿನ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸುವ ಸಲುವಾಗಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರೇ ಕುಮಾರಣ್ಣನ ಗ್ರಾಮವಾಸ್ತವ್ಯವನ್ನು ಬಣ್ಣಿಸಿದ್ದಾರೆ.
ಬಿಜೆಪಿಯವರ ದೊಂಬರಾಟ, ಆರ್ಕೇಸ್ಟ್ರಾ, ಡ್ಯಾನ್ಸ್ ಇವುಗಳಿಂದ ಗ್ರಾಮವಾಸ್ತವ್ಯ ಮಾಡುತ್ತಿಲ್ಲ ಎಂಬುದನ್ನು ಬಿಜೆಪಿ ಮುಖಂಡರು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.





