ಸರಕಾರದಿಂದ ಜನರ ಸಾವು ಮತ್ತು ಸಂಕಷ್ಟಗಳ ‘ಸಂಭ್ರಮಾಚರಣೆ’: ಎಡರಂಗ

ಹೊಸದಿಲ್ಲಿ,ನ.8: ನರೇಂದ್ರ ಮೋದಿ ಸರಕಾರದ ವಿರುದ್ಧ ಬುಧವಾರ ತೀವ್ರ ಟೀಕಾಪ್ರಹಾರ ನಡೆಸಿದ ಎಡರಂಗವು, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರವೊಂದು ಜನರ ಸಾವು ಮತ್ತು ಸಂಕಷ್ಟಗಳ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಬಣ್ಣಿಸಿತು.
ಕೇಂದ್ರ ನೋಟು ಅಮಾನ್ಯ ನೀತಿಯ ವಿರುದ್ಧ ಸಿಪಿಎಂ ಮತ್ತು ಸಿಪಿಐ ಸೇರಿದಂತೆ ಆರು ಎಡಪಕ್ಷಗಳು ನಡೆಸಿದ ರ್ಯಾಲಿಯಲ್ಲಿ ಮಾತನಾಡಿದ ಸಿಪಿಎಂ ನಾಯಕಿ ಬೃಂದಾ ಕಾರಾಟ್ ಅವರು, ಮೋದಿ ಸರಕಾರವು ವಿಶ್ವದಲ್ಲಿ ಎರಡು ದಾಖಲೆಗಳನ್ನು ಸೃಷ್ಟಿಸಿದೆ. ಒಂದು, ಅದು ಜನರು ಸರದಿ ಸಾಲುಗಳಲ್ಲಿ ನಿಲ್ಲುವಂತೆ ಮಾಡಿತ್ತು ಮತ್ತು ಹಲವಾರು ಜನರು ಪ್ರಾಣ ಕಳೆದುಕೊಂಡರು. ಎರಡನೆಯದು, ನೋಟು ಅಮಾನ್ಯದ ಮೂಲಕ ತಾನು ಕಪ್ಪುಹಣವನ್ನು ನಿಲ್ಲಿಸುತ್ತೇನೆ ಎಂದು ಮೋದಿ ಜನತೆಗೆ ಮತ್ತು ವಿಶ್ವಕ್ಕೆ ಹೇಳಲು ಪ್ರಯತ್ನಿಸಿದ್ದರಾದರೂ ವಾಸ್ತವದಲ್ಲಿ ಅವರು ಕಪ್ಪುಹಣ ಖದೀಮರು ತಮ್ಮ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ನೆರವಾಗಿದ್ದರು ಎಂದು ಹೇಳಿದರು.
ನೋಟು ಅಮಾನ್ಯ ಕ್ರಮದ ಮೊದಲ ವರ್ಷಾಚರಣೆಯ ಅಂಗವಾಗಿ ಕೇಂದ್ರದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಅವರು, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರವೊಂದು ಜನರ ಸಾವು ಮತ್ತು ಸಂಕಷ್ಟಗಳ ಸಂಭ್ರಮವನ್ನು ಆಚರಿಸುತ್ತಿದೆ ಎಂದರು.
ರ್ಯಾಲಿಯಲ್ಲಿ ಮಾತನಾಡಿದ ಹಲವಾರು ಎಡರಂಗ ನಾಯಕರು ರೈತರ ಬವಣೆ ಮತ್ತು ಜನರ ಉದ್ಯೋಗ ನಷ್ಟವನ್ನು ಪ್ರಮುಖವಾಗಿ ಬಿಂಬಿಸಿದರು.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ, ಆದರೆ ಸರಕಾರವು ನೋಟು ಅಮಾನ್ಯದ ತನ್ನ ತಪ್ಪನ್ನು ಈವರೆಗೂ ಒಪ್ಪಿಕೊಂಡಿಲ್ಲ ಎಂದ ಸಿಪಿಐ ನಾಯಕ ಅತುಲ್ ಅಂಜಾನ್ ಅವರು, ಮೋದಿಯವರು ಜನರಿಗಾಗಿ ನರಕವನ್ನು ಸೃಷ್ಟಿಸಿದ್ದಾರೆ ಎಂದರು.







