ಕರಾಳ ದಿನಾಚರಣೆ ಮೂಲಕ ಕಾಂಗ್ರೆಸ್ ನಿಂದ 'ಕಪ್ಪು ಹಣ'ಕ್ಕೆ ಬೆಂಬಲ: ಪ್ರಕಾಶ್ ಜಾವಡೇಕರ್
ಗರಿಷ್ಠ ಮೊತ್ತದ ನೋಟು ರದ್ದು

ಬೆಂಗಳೂರು, ನ.8: ಗರಿಷ್ಠ ಮೊತ್ತದ ನೋಟು ಅಮಾನ್ಯೀಕರಣ ದಿನವನ್ನು ಕಾಂಗ್ರೆಸ್ ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಕಪ್ಪುಹಣಕ್ಕೆ ಬೆಂಬಲ ನೀಡಿ ‘ಕಪ್ಪುಹಣ ಬೆಂಬಲ ದಿನಾಚರಣೆ’ಗೆ ಮುಂದಾಗಿದೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ಲೇವಡಿ ಮಾಡಿದ್ದಾರೆ.
ಬುಧವಾರ ಇಲ್ಲಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ನೋಟು ರದ್ದು ಎಂಬುದು ಭ್ರಷ್ಟಾಚಾರದ ವಿರುದ್ಧ ಒಬ್ಬ ಸಾಮಾನ್ಯ ಪ್ರಜೆಯ ಯುದ್ಧ. ದೇಶದ ಜನ ಸಾಮಾನ್ಯರು ನೋಟು ರದ್ದನ್ನು ಒಪ್ಪಿದ್ದಾರೆ. ಪ್ರಧಾನಿ ಮೋದಿಯವರು ಪ್ರಾಮಾಣಿಕರ ಪರವಾಗಿ, ಬಡವರ ಪರವಾಗಿ ಹೋರಾಟ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಭ್ರಷ್ಟಾಚಾರಕ್ಕಾಗಿ ಭ್ರಷ್ಟಾಚಾರಿಗಳಿಗಾಗಿಯೇ ಇರುವಂತಹದ್ದು ಎಂದು ಟೀಕಿಸಿದರು.
ಗರಿಷ್ಠ ಮೊತ್ತದ ನೋಟುಗಳ ಚಲಾವಣೆ ರದ್ದುಪಡಿಸಿದ ಬಳಿಕ ದೇಶದಲ್ಲಿ ಡಿಜಿಟಲ್ ಆರ್ಥಿಕತೆ ಬೆಳವಣಿಗೆಯಾಗಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಮೂರುವರೆ ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಸರಕಾರ ಸಾಕಷ್ಟು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಪ್ರಧಾನಿ ಮೋದಿ 500 ರೂ. ಮತ್ತು 1 ಸಾವಿರ ರೂ.ನೋಟು ರದ್ದು ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದು ಸಮರ್ಥಿಸಿದ ಪ್ರಕಾಶ್ ಜಾವಡೇಕರ್, ನವೆಂಬರ್ 8 ಅನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಲಾಗುವುದು ಎಂದರು.
ಕ್ಲೀನ್ ಮ್ಯಾನ್: ಕೇಂದ್ರ ಸಚಿವ ಜಯಂತ ಸಿನ್ಹಾ ಒಬ್ಬ ಸ್ವಚ್ಛ ವ್ಯಕ್ತಿ. ಅವರ ಮೇಲೆ ಯಾವುದೇ ಕೇಸ್‌ಗಳೂ ಇಲ್ಲ. ಯಾವುದೋ ಪೇಪರ್ಸ್ ಲಿಸ್ಟ್‌ನಲ್ಲಿ ಹೆಸರು ಬಂದ ತಕ್ಷಣ ಅವರು ಅಪರಾಧಿಯಲ್ಲ, ಸೂಕ್ತ ತನಿಖೆ ನಡೆದ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಜಾವಡೇಕರ್ ಸಮರ್ಥಿಸಿದರು.
ಕೇಂದ್ರ ಸರಕಾರ ಪನಾಮ ಲೀಕ್ಸ್, ಎಚ್‌ಎಸ್‌ಬಿಸಿ ಖಾತೆಗಳ ಮೇಲೂ ತನಿಖೆ ನಡೆಸಿದೆ. ಇವುಗಳಿಂದ 800 ಕೋಟಿ ರೂ. ಕಪ್ಪುಹಣ ಸಿಕ್ಕಿದೆ. ಅದೇ ರೀತಿ ಕಪ್ಪುಹಣವನ್ನ ಪತ್ತೆಹಚ್ಚಲು ಎಲ್ಲ ಪೇಪರ್ಸ್‌ಗಳ ಲಿಸ್ಟ್ ಪರಿಗಣಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಯುಪಿಎ ಆಡಳಿತಾವಧಿಯಲ್ಲಿ 2ಜಿ ಹಗರಣ, ಕಲ್ಲಿದ್ದಲು ಹಗರಣಗಳು ನಡೆದಿದ್ದವು. ಲಕ್ಷಾಂತರ ಕೋಟಿ ರೂ. ಮೊತ್ತದ ಹಗರಣಗಳನ್ನು ಆಗಿನ್ ಕಾಂಗ್ರೆಸ್ ಸರಕಾರ ನಡೆಸಿತ್ತು. ನಾವು ಅವರ ಹಗರಣಗಳನ್ನು ಬಯಲು ಮಾಡಿದೆವು. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹಾಗೂ ಕಪ್ಪುಹಣಕ್ಕೆ ಬೆಂಬಲ ನೀಡುವ ಪಕ್ಷ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರದಿಂದ ಆಚರಿಸಲಾಗುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಗೆ ಬಿಜೆಪಿ ಮುಖಂಡರು ಯಾರೂ ಹೋಗುವುದಿಲ್ಲ. ಟಿಪ್ಪು ಸ್ವಾತಂತ್ರ ಹೋರಾಟಗಾರನೂ ಅಲ್ಲ, ದೇಶ ಪ್ರೇಮಿಯೂ ಅಲ್ಲ. ರಾಜಕಾರಣಕ್ಕಾಗಿ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸುತ್ತಿದೆ.
-ಆರ್.ಅಶೋಕ್, ಬಿಜೆಪಿ ಮುಖಂಡ







