ಹಳೇ ದ್ವೇಷ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು, ನ. 8: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗುಂಪೊಂದು ಯುವಕನ ಮೇಲೆ ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದೆ.
ಹಲ್ಲೆಯಿಂದ ಸುಭಾಷ್ (24) ಎಂಬ ಯುವಕ ಗಂಭೀರವಾಗಿ ಗಾಯ ಗೊಂಡಿದ್ದಾನೆ. ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಗರುಡಮಹಲ್ ಬಳಿಯ ಪುಟ್ಬಾಲ್ ಸ್ಟೇಡಿಯಂ ಬಳಿ ಹಲ್ಲೆ ನಡೆಸಿದ್ದು, ಅಪ್ಪು ಮತ್ತವನ ಸಹಚರರಿಂದ ಸುಭಾಷ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗೊತ್ತಾಗಿದೆ.
ಹಲ್ಲೆಗೊಳಗಾದ ಸುಭಾಷ್, ಚಿಕ್ಕಪ್ಪನ ಮಗನಾದ ಆರೋಪಿ ಅಪ್ಪು ನಡುವೆ ಹಳೇ ದ್ವೇಷ ಹಿನ್ನಲೆ ಹಲವು ಬಾರಿ ಗಲಾಟೆ ನಡೆದಿತ್ತು. ಸುಭಾಷ್ ಕೂಡ, ಅಪ್ಪು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅದೃಷ್ಟವಶಾತ್ ಅಪ್ಪುಪ್ರಾಣಾಪಾಯದಿಂದ ಪರಾಗಿದ್ದ. ಈ ಸಂಬಂಧ ಅಶೋಕ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಸುಭಾಷ್ ಇದೇ ಪ್ರಕರಣ ಸಂಬಂಧ ಜೈಲಿಗೆ ಹೋಗಿ ಇತ್ತಿಚೆಗೆಷ್ಟೆ ಜಾಮೀನಿನ ಮೇಲೆ ಹೊರ ಬಂದಿದ್ದ. ಇದನ್ನೇ ಕಾಯುತ್ತಿದ್ದ ಅಪ್ಪು ಬುಧವಾರ ಬೆಳಗ್ಗೆ ಏಕಾಏಕಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಅಶೋಕ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.







