ಕೇಂದ್ರ ಸರಕಾರ ಶ್ವೇತಪತ್ರ ಹೊರಡಿಸಲಿ: ಸಚಿವ ಖಾದರ್

ಮಂಗಳೂರು, ನ.8: ನೋಟ್ ರದ್ದತಿಯ ಬಳಿಕ ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಜನಸಾಮಾನ್ಯರು, ಉದ್ಯಮಿಗಳು ಆರ್ಥಿಕ ಹೊಡೆತಕ್ಕೆ ತತ್ತರಿಸಿದ್ದಾೆ. ಮುಂದೇನು ಎಂದು ಗಾಬರಿಗೊಳಗಾಗುತ್ತಿದ್ದಾರೆ. ಹಾಗಾಗಿ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ವೇತಪತ್ರ ಹೊರಡಿಸಬೇಕು ಎಂದು ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ದಿನಾ ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಅವರ ಪ್ರತಿಯೊಂದು ಯೋಜನೆ ಕೂಡ ದೂರದೃಷ್ಟಿತ್ವ ಇಲ್ಲದ್ದು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕ ಸ್ಥಿತಿಯು ಉತ್ತಮವಾಗಿತ್ತು. ಅಮೇರಿಕಾದಲ್ಲಿ ಆರ್ಥಿಕ ದಿವಾಳಿ ಎದ್ದಾಗ ಅದು ಭಾರತಕ್ಕೆ ಕಾಲಿಡದಂತೆ ಮುನ್ನಚ್ಚರಿಕೆ ವಹಿಸಿದ್ದರು. ಆದರೆ, ಪ್ರಧಾನಿಗೆ ಆ ಛಾತಿಯೇ ಇಲ್ಲ. ದೇಶದ ಜನರು ಸ್ವಾಭಿಮಾನದಿಂದ ಬದುಕುವುದೂ ಕೂಡ ಪ್ರಧಾನಿಗೆ ಇಷ್ಟವಿಲ್ಲ. ಪೊಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ನೋಟು ಅಮಾನ್ಯದ ಬಳಿಕ ಕಪ್ಪು ಹಣ ಪತ್ತೆ ಹಚ್ಚುತ್ತೇವೆ, ಭಯೋತ್ಪಾದನೆ ನಿಗ್ರಹಿಸುತ್ತೇವೆ ಎಂದರು. ಆದರೆ ಮೋದಿಗೆ ಅದ್ಯಾವುದೂ ಆಗಲಿಲ್ಲ.2012-13ರಲ್ಲಿ 29.630 ಕೋ.ರೂ., 2013-14ರಲ್ಲಿ 101.183 ಕೋ.ರೂ., 2014-15ರಲ್ಲಿ 23.108 ಕೋ.ರೂ., 2015-16ರಲ್ಲಿ 20.721 ಕೋ.ರೂ., 2016-17ರಲ್ಲಿ 29.211 ಕೋ.ರೂ. ಪತ್ತೆ ಹಚ್ಚಲಾಗಿದೆ. ಮೋದಿ ಭರವಸೆ ನೀಡಿದಂತೆ ಭಾರೀ ಪ್ರಮಾಣದ ಕಪ್ಪು ಹಣ ಪತ್ತೆ ಹಚ್ಚಲಿಲ್ಲ. ಇಷ್ಟೇ ಪ್ರಮಾಣದ ಹಣವನ್ನು ಯುಪಿಎ ಸರಕಾರವಿದ್ದಾಗಲೂ ಪತ್ತೆಹಚ್ಚಲಾಗಿತ್ತು ಎಂದ ಖಾದರ್, ಕಪ್ಪುಹಣ ಪತ್ತೆ ಹಚ್ಚಿದ್ದಕ್ಕಿಂತಲೂ ಹೊಸ ನೋಟು ಮುದ್ರಣಕ್ಕೆ ವ್ಯಯಿಸಿದ್ದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಜನಾರ್ದನ ಪೂಜಾರಿ ಕೇಂದ್ರ ವಿತ್ತ ಸಚಿವರಾಗಿದ್ದಾಗ ಬ್ಯಾಂಕ್ ಅಧಿಕಾರಿಗಳು ಜನರ ಬಳಿಗೆ ಧಾವಿಸುತ್ತಿದ್ದರು. ಆದರೆ, ಈಗ ಜನರು ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಂತು ಪ್ರಾಣ ಕಳಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮದೇ ಹಣ ಪಡೆಯಲು ಪರದಾಡುವಂತಾಗಿದೆ ಎಂದು ಖಾದರ್ ತಿಳಿಸಿದರು.
ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ಅಪ್ರತಿಮ ಸ್ವಾತಂತ್ರ ಹೋರಾಟಗಾರ. ಆತ ಜಾತ್ಯತೀತ ರಾಜ. ಇಂತಹ ಹಲವು ಸಾಧಕರ ಜಯಂತಿಯನ್ನು ಸರಕಾರ ಆಯೋಜಿಸುತ್ತಿದೆ. ಅದೇ ರೀತಿ ಟಿಪ್ಪು ಜಯಂತಿಯನ್ನು ಕೂಡ ಸರಕಾರದ ವತಿಯಿಂದಲೇ ಆಚರಿಸಲಾಗುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಖಾದರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಮೇಯರ್ ರಜನೀಶ್, ಕಾರ್ಪೊರೇಟರ್ ಲತೀಫ್ ಕಂದುಕ, ಯುವ ಕಾಂಗ್ರೆಸ್ಸಿನ ನಝರ್ ಷಾ ಪಟ್ಟೋರಿ ಮತ್ತಿತರರು ಉಪಸ್ಥಿತರಿದ್ದರು.







