ಟಿಪ್ಪು ಜಯಂತಿ: ಕೊಡಗಿನಲ್ಲಿ 2 ದಿನ ನಿಷೇಧಾಜ್ಞೆ ಜಾರಿ

ಮಡಿಕೇರಿ, ನ.8: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ವಿವಾದ ಕಾವೇರುತ್ತಿದ್ದಂತೆಯೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನ.9 ರಂದು ಬೆಳಗ್ಗೆ 6 ಗಂಟೆಯಿಂದ ನ.11ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144ರ ಅಡಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದೆ.
ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪರ, ವಿರೋಧ ಹೇಳಿಕೆ ಮತ್ತು ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಆದೇಶವನ್ನು ಜಾರಿಗೊಳಿಸಿದ್ದಾರೆ.
ಸರಕಾರಿ ಕಾರ್ಯಕ್ರಮ, ಮದುವೆ ಸಮಾರಂಭಗಳು ಹಾಗೂ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಡೆಯುವ ಜಾತ್ರೆಯನ್ನು ಹೊರತು ಪಡಿಸಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನವೆಂಬರ್ 10 ರಂದು ಬೆಳಗ್ಗೆ 9.30 ರಿಂದ 11.30ವರೆಗೆ ಕೊಡಗಿನ ಮೂರು ತಾಲೂಕುಗಳಾದ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯುವ ಸ್ಥಳಗಳ ಆವರಣದಲ್ಲಿ ನಿಷೇಧಾಜ್ಞೆಯನ್ನು ಸಡಿಲಿಸಲಾಗಿದೆ. ಕುಶಾಲನಗರದ ಶ್ರೀಗಣಪತಿ ಸೇವಾ ಸಮಿತಿ ವತಿಯಿಂದ ನಡೆಯುವ ಜಾತ್ರೆ ಹಾಗೂ ಗೋ ಪ್ರದರ್ಶನ ಕಾರ್ಯಕ್ರಮವನ್ನು ಹೊರತು ಪಡಿಸಿದಂತೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಸಂತೆ ಮತ್ತು ಜಾತ್ರೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ 5 ಜನಕ್ಕಿಂತ ಮೇಲ್ಪಟ್ಟು ಗುಂಪು ಸೇರಬಾರದು, ಯಾವುದೇ ರೀತಿಯ ಆಯುಧ ಹಿಡಿದು ಓಡಾಡಬಾರದೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ ಉಭಯ ಕಡೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತ ಶಾಂತಿ ಸಭೆಯನ್ನು ನಡೆಸಿತ್ತಾದರು ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಪ್ರಮುಖರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿ ಸಮಾಲೋಚಿಸಿದರು.







