ಸಣ್ಣ ಕೈಗಾರಿಕೆಗಳಿಗೆ ಸರಕಾರ ಪ್ರೋತ್ಸಾಹ: ಪವನ್‌ರಾಜ್
ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯ ಸಮಾರೋಪ
ಮಂಗಳೂರು, ನ.8: ಸಣ್ಣ ಕೈಗಾರಿಕೆಗಳಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಎಂಆರ್‌ಪಿಎಲ್ ರಿಫೈನರಿ ವಿಭಾಗದ ಜಿಎಂ ಪವನ್‌ರಾಜ್ ಹೇಳಿದರು.
ದ.ಕ. ಜಿಲ್ಲಾಡಳಿತ, ದ.ಕ. ಮತ್ತು ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಮತ್ತು ಉಡುಪಿ, ಕಾಸಿಯಾ, ಎಂಎಸ್‌ಎಂಇ, ಡಿಐ ಮತ್ತು ಕಾರ್ಪೋರೇಶನ್ ಬ್ಯಾಂಕ್‌ನ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಬುಧವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ-2017ರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ ಬೆನ್ನೆಲುಬು ಆಗಿವೆ. ಆರ್ಥಿಕತೆ ಸುಸ್ಥಿರವಾಗಬೇಕಾದರೆ ಸಣ್ಣ ಕೈಗಾರಿಕಾ ಉದ್ಯಮದ ಪಾತ್ರ ಅಪಾರ ಎಂಬುದು ಸರಕಾರದ ಯೋಜನೆಯಾಗಿದೆ. ಅದಕ್ಕಾಗಿಯೇ ಈ ರಂಗಕ್ಕೆ ಹೆಚ್ಚಿನ ಮಹತ್ವ ದೊರಕಿದೆ ಎಂದು ಪವನ್‌ರಾಜ್ ನುಡಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷೆ ವಾತಿಕಾ ಪೈ, ಡಿಐಸಿ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಬೆಂಗಳೂರು ಎಂಎಸ್‌ಎಂಇ-ಡಿಐ ನಿರ್ದೇಶಕ ರಂಗಪ್ರಸಾದ್, ಕಾಸಿಯಾ ಪ್ರತಿನಿಧಿ ಅರುಣ್ ಪಡಿಯಾರ್, ದ.ಕ. ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಪೈ, ಬ್ರಾಂಚ್ ಎಂಎಸ್‌ಎಂಇ ಡಿನ ಉಪ ನಿರ್ದೇಶಕ ಕೆ. ಸಾಕ್ರೆಟಿಸ್, ಸಹ ನಿರ್ದೇಶಕ ಜಿ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.







