ದಲಿತ ಪ್ರಾಧ್ಯಾಪಕರು ಅಂಬೇಡ್ಕರ್ ವಿಚಾರಧಾರೆ ಪ್ರಸರಿಸಲಿ: ಗೋಪಾಲ್
ಬೆಂಗಳೂರು, ನ.8: ರಾಜ್ಯದ ಎಲ್ಲ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿರುವ ದಲಿತ ಪ್ರಾಧ್ಯಾಪಕರು ಸಂಘಟಿತರಾಗಿ ಅಂಬೇಡ್ಕರ್ ವಿಚಾರಧಾರೆಗಳನ್ನು ಜನ ಸಮುದಾಯಕ್ಕೆ ತಲುಪಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಪ್ರಜಾ ಪರಿವರ್ತನಾ ಪಕ್ಷದ ಅಧ್ಯಕ್ಷ ಬಿ.ಗೋಪಾಲ್ ತಿಳಿಸಿದ್ದಾರೆ.
ಬುಧವಾರ ನಗರದ ಸರಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪರಿಶಿಷ್ಟ ಜಾತಿ-ವರ್ಗಗಳ ಅಧ್ಯಾಪಕರು ಸಂಘ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಮೀಸಲಾತಿಯ ಫಲವಾಗಿ ದಲಿತ ಸಮುದಾಯದ ಸಾವಿರಾರು ಸರಕಾರದ ಉನ್ನತ ಹುದ್ದೆಗಳಲ್ಲಿ ಅಲಂಕರಿಸಿದ್ದಾರೆ. ಹಾಗೂ ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಜವಾಬ್ದಾರಿ ಅಪರಿಮಿತವಾಗಿದ್ದು, ಅಂಬೇಡ್ಕರ್ ವಿಚಾರಧಾರೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವುದು ಹಾಗೂ ದಲಿತ ಸಮುದಾಯದ ಏಳ್ಗೆಗಾಗಿ ಶ್ರಮಿಸಬೇಕಾಗಿದೆ ಎಂದು ಅವರು ಆಶಿಸಿದರು.
ಸಂಕುಚಿತ ಮನಸ್ಥಿತಿ: ಇಡೀ ವಿಶ್ವವೇ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಯನ್ನು ಅರಿಯುತ್ತಿದ್ದಾರೆ. ಅವರ ಹುಟ್ಟಿದ ದಿನವನ್ನು ಜ್ಞಾನ ದಿನವನ್ನಾಗಿ ಆಚರಿಸಿ ಗೌರವಿಸಲಾಗುತ್ತಿದೆ. ಆದರೆ, ದೇಶದಲ್ಲಿರುವ ದಲಿತೇತರರು ಅಂಬೇಡ್ಕರ್ ಕುರಿತು ಈಗಲೂ ಸಂಕುಚಿತ ಮನಸ್ಥಿತಿಯಿಂದ ಕೂಡಿದ್ದಾರೆ. ಇಂತಹವರಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮುಟ್ಟಿಸಬೇಕಾಗಿದೆ ಎಂದರು.
ಅಪರ ಪೊಲೀಸ್ ಆಯುಕ್ತ ಡಾ.ಎಂ.ನಂಜುಂಡಸ್ವಾಮಿ ಮಾತನಾಡಿ, ಎಸ್ಸಿ, ಎಸ್ಟಿ ಪ್ರಾಧ್ಯಾಪಕರ ಸಂಘಟನೆ ಸ್ಥಾಪಿಸಿರುವುದು ಸಂತೋಷದ ವಿಚಾರ. ಆದರೆ, ಅದನ್ನು ಒಂದು ಮಾದರಿ ಸಂಘಟನೆಯಾಗಿ ಹೇಗೆ ಕಟ್ಟಿ ಬೆಳೆಸುತ್ತೀರ ಎಂಬುದರ ಕುರಿತು ಸರಿಯಾದ ಕಾರ್ಯಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಎಸ್ಸಿ, ಎಸ್ಟಿ ಪ್ರಾಧ್ಯಾಪಕರು ಸಂಘವನ್ನು ಸಂಪೂರ್ಣವಾಗಿ ಸಮುದಾಯಕ್ಕಾಗಿ ಮೀಸಲಿಡಿ. ಪ್ರತಿ ತಿಂಗಳು ಸಮಾಜ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಕುರಿತು ವಿಚಾರ ಗೋಷ್ಠಿ ಚರ್ಚಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾದರಿಯ ಸಂಘಟನೆಯಾಗಿ ರೂಪಿಸಬೇಕು. ಆಗ ಮಾತ್ರ ಎಸ್ಸಿ, ಎಸ್ಟಿ ಪ್ರಾಧ್ಯಾಪಕರ ಸಂಘಕ್ಕೆ ಸಮಾಜದಲ್ಲಿ ಮಾನ್ಯತೆ ಸಿಗಲಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಜು ಮಾತನಾಡಿ, ದಲಿತ ಸಮುದಾಯದ ವಿದ್ಯಾವಂತ ವರ್ಗದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಕೇವಲ ಸಂಘಗಳನ್ನು ಕಟ್ಟುವುದು ಮುಖ್ಯವಲ್ಲ. ಆ ಸಂಘದ ಮುಖಾಂತರ ಸಮುದಾಯಕ್ಕೆ ಯಾವ ರೀತಿಯಲ್ಲಿ ನೆರವಾಗುತ್ತೀರ ಎಂಬುದರ ಮೇಲೆ ಎಸ್ಸಿ, ಎಸ್ಟಿ ಪ್ರಾಧ್ಯಾಪಕರ ಸಂಘದ ಅಸ್ತಿತ್ವ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‌ಕುಮಾರ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಚಂದ್ರಕಾಂತ ಶಿವಕೇರಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ.ಎಂ.ಕೆ.ನಾಯಕ್, ಬೆಂವಿವಿ ಸಿಂಡಿಕೇಟ್ ಸದಸ್ಯ ಎನ್.ವಿಜಯಕುಮಾರ್ ಸಿಂಹ, ಶಿವಣ್ಣ, ಕಲಾವಿದ ಮದನ್ ಪಟೇಲ್, ಕರ್ನಾಟಕ ದಲಿತ ಮಹಿಳಾ ವೇದಿಕೆಯ ಸಂಚಾಲಕಿ ಯಶೋಧ ಹಾಗೂ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪರಿಶಿಷ್ಟ ಜಾತಿ/ವರ್ಗಗಳ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣಪ್ಪ, ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅಶೋಕ್, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶ್ ಉಪಸ್ಥಿತರಿದ್ದರು.
ಎಸ್ಸಿ, ಎಸ್ಟಿ ಪ್ರಾಧ್ಯಾಪಕರ ಸಂಘವು ಯೂಟ್ಯೂಬ್, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಭೆಗಳಲ್ಲಿ ಮಾತನಾಡುವ ಗಣ್ಯರ ಮಾತುಗಳನ್ನು ಧ್ವನಿ ಮುದ್ರಿಸಿ ಯೂಟ್ಯೂಬ್‌ನಲ್ಲಿ ಹಾಕಬೇಕು. ತಮ್ಮ ಸಂಘ ಹಾಗೂ ಸಮಾಜದ ಏಳ್ಗೆಗಾಗಿ ಪತ್ರಿಕೆಯೊಂದನ್ನು ನಡೆಸಬೇಕು. ಹಾಗೂ ಪುಸ್ತಕ ಪ್ರಕಟನೆ, ಮಾರಾಟ ಸೇರಿದಂತೆ ಹತ್ತು ಹಲವು ಸಮಾಜಕ್ಕೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ.
-ಡಾ.ಎಂ.ನಂಜುಂಡಸ್ವಾಮಿ, ದಲಿತ ಮುಖಂಡ







