ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ನ.10ಕ್ಕೆ ಶಾಸಕರಿಗೆ ಎಸ್‌ಎಂಎಸ್ ಸಂದೇಶ
ಬೆಂಗಳೂರು, ನ. 8: ಇದೇ ತಿಂಗಳ 13ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಜ್ಜುಗೊಂಡಿದ್ದು, ನ.10ಕ್ಕೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಊಟ, ವಸತಿ ಸೌಲಭ್ಯಗಳ ಬಗ್ಗೆ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ.
ಇದೇ ಮೊಟ್ಟ ಮೊದಲಬಾರಿಗೆ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅನುಕೂಲಕ್ಕಾಗಿ ‘ಹೆಲ್ಪ್‌ಡೆಸ್ಕ್’ ಸ್ಥಾಪಿಸಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಎಲ್ಲ ಸದಸ್ಯರಿಗೆ ಊಟ, ವಸತಿ, ವೈದ್ಯಕೀಯ ವ್ಯವಸ್ಥೆ ಸೇರಿ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
ಹೆಲ್ಪ್‌ಡೆಸ್ಕ್‌ನಲ್ಲಿ ಹತ್ತುಕ್ಕೂ ಹೆಚ್ಚು ಸಿಬ್ಬಂದಿಯಿದ್ದು, ಶಾಸಕರು ಮತ್ತು ಅಧಿಕಾರಿಗಳು ಸೇರಿದಂತೆ ಸಚಿವಾಲಯ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಲು ನೆರವಾಗಲಿದ್ದಾರೆ. ಊಟ, ವಸತಿ, ವೈದ್ಯಕೀಯ ಸೌಲಭ್ಯಗಳಿಗಾಗಿ ಅಲೆದಾಟ-ಗೊಂದಲ ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿಗೆ ವಸತಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರೊಂದಿಗೆ ಸ್ಪೀಕರ್ ಕೋಳಿವಾಡ ಸಭೆ ನಡೆಸಲಾಗಿದೆ. ಭದ್ರತೆಗೆ ನಿಯೋಜನೆಗೊಳ್ಳುವ ಎಲ್ಲ ಪೊಲೀಸ್ ಸಿಬ್ಬಂದಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ರಸ್ತೆ ಬದಿಯಲ್ಲಿ ಪೊಲೀಸ್ ಸಿಬ್ಬಂದಿ ಶೌಚಕ್ಕೆ ತೆರಳುವ, ಅಲ್ಲೆ ಸ್ನಾನ ಮಾಡುವ ವ್ಯವಸ್ಥೆಗೆ ಇತಿಶ್ರೀ ಹಾಡಿದ್ದು, ಬೆಳಗಾವಿಯ ವಿವಿಧ ಕಲ್ಯಾಣ ಮಂಟಪಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ 1 ಕೋಟಿ ರೂ. ಮುಂಗಡ ಹಣ ನೀಡಲಾಗಿದೆ ಎಂದು ವಿವರಿಸಿದರು.
ಪ್ರತಿಭಟನೆಗೂ ವ್ಯವಸ್ಥೆ: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸುವ ಸಂಘ-ಸಂಸ್ಥೆಗಳಿಗೆ ಸೂಕ್ತ ಸ್ಥಳಾವಕಾಶ, ಟೆಂಟ್, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮೂರ್ತಿ ವಿವರ ನೀಡಿದರು.







