ವಿನಾಶಕ ಪರಿಣಾಮಕ್ಕೆ ಕ್ಷಮೆ ಯಾಚಿಸಿ: ಪ್ರಕಾಶ್ ರೈ
ನೋಟ್ ಬ್ಯಾನ್

ಚೆನ್ನೈ, ನ. 8: ನಗದು ನಿಷೇಧದಿಂದಾದ ವಿನಾಶಕ ಪರಿಣಾಮಕ್ಕೆ ಸಂಬಂಧಪಟ್ಟವರು ಕ್ಷಮೆ ಕೋರುವಂತೆ ಆಗ್ರಹಿಸಿ ನಟ ಪ್ರಕಾಶ್ ರೈ ಬುಧವಾರ ಟ್ವಿಟ್ಟರ್‌ನಲ್ಲಿ ಟಪ್ಪಣಿಯೊಂದನ್ನು ಬರೆದಿದ್ದಾರೆ.
ಕಳೆದ ವರ್ಷ ನವೆಂಬರ್ 8ರಂದು ಸರಕಾರ ತೆಗೆದುಕೊಂಡ ನಿರ್ಧಾರವನ್ನು ರಾಷ್ಟ್ರಪ್ರಶಸ್ತಿ ವಿಜೇತ 52ರ ಹರೆಯದ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಇದು ಯಾರಿಗೆ ಸಂಬಂಧಿಸಿದೆಯೋ ಅವರಿಗೆ ಎಂಬ ಶೀರ್ಷಿಕೆಯಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ಕಪ್ಪು ಹಣವನ್ನು ಹೊಳೆಯುವ ನೋಟಾಗಿ ಪರಿವರ್ತಿಸಲು ಶ್ರೀಮಂತರು ದಾರಿಗಳನ್ನು ಕಂಡುಕೊಂಡಿದ್ದಾರೆ. ಆದರೆ, ನಗದು ನಿಷೇಧದಿಂದ ಲಕ್ಷಾಂತರ ಬಡವರು, ಅಸಂಘಟಿತ ಕಾರ್ಮಿಕರು ತೊಂದರೆ ಎದುರಿಸುತ್ತಿದ್ದಾರೆ. ನಮ್ಮ ಕಾಲದ ಮಹಾ ಪ್ರಮಾದಕ್ಕೆ ಕ್ಷಮೆ ಕೋರಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಪ್ರಕಾಶ್ ರೈ, ಅನೈತಿಕ ಪೊಲೀಸ್ ಗಿರಿ, ಗೋ ಸಾಗಾಟಗಾರರು ಎಂದು ಶಂಕಿಸಿ ಥಳಿಸಿ ಹತ್ಯೆಗೈಯುವುದು, ಧರ್ಮದ ಹೆಸರಿಲ್ಲಿ ಭಯೋತ್ಪಾದನೆ ನಡೆಸುವವರ ವಿರುದ್ಧ ಧ್ವನಿ ಎತ್ತಿದ್ದರು.
Next Story





